ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯೋಧರು ಎಷ್ಟು ಗೊತ್ತೇ ?
ಶಾಕಿಂಗ್ ನ್ಯೂಸ್

ಹೊಸದಿಲ್ಲಿ, ಮಾ. 11: ಯೋಧರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಎಲ್ಲ ಕ್ರಮಗಳನ್ನು ಸರಕಾರಗಳು ಕೈಗೊಳ್ಳುತ್ತಿದ್ದರೂ, ಪ್ರತಿ ವರ್ಷ ಸಶಸ್ತ್ರ ಪಡೆಗಳ 100ಕ್ಕೂ ಹೆಚ್ಚು ಯೋಧರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. 2016ರಲ್ಲಿ 125 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆ ರಾಜ್ಯಸಚಿವ ಸುಭಾಶ್ ಭಾಮ್ರೆ, "101 ಮಂದಿ ಯೋಧರು ಹಾಗೂ 19 ಮಂದಿ ವಾಯುಪಡೆ ಯೋಧರು, ಐದು ಮಂದಿ ನೌಕಾಪಡೆ ಯೋಧರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹೋದ್ಯೋಗಿ ಅಥವಾ ಮೇಲಧಿಕಾರಿಯನ್ನು ಹತ್ಯೆ ಮಾಡಿದ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ" ಎಂದು ಸ್ಪಷ್ಟಪಡಿಸಿದರು.
ಈ ವರ್ಷ ಈಗಾಗಲೇ 13 ಮಂದಿ ಸೇನಾಪಡೆ ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತೀಯ ವಾಯುಪಡೆಯಿಂದ ಇಂಥ ಎರಡು ಪ್ರಕರಣಗಳು ವರದಿಯಾಗಿವೆ. ದೂರದ ಪ್ರದೇಶಗಳಿಗೆ ನಿಯೋಜಿತರಾದ ಸೈನಿಕರು ಸಾಮಾನ್ಯವಾಗಿ ಗಂಭೀರ ಒತ್ತಡಕ್ಕೆ ಒಳಗಾಗುತ್ತಾರೆ. ಮನೆಗಳಲ್ಲಿ ತಮ್ಮ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾನಸಿಕ ಒತ್ತಡದಿಂದ ಇಂಥ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಯೋಧರ ಕುಟುಂಬಗಳು ಎದುರಿಸುತ್ತಿರುವ ಆಸ್ತಿ ವ್ಯಾಜ್ಯ, ಸಮಾಜಘಾತುಕರಿಂದ ಕಿರುಕುಳ, ಹಣಕಾಸು ಹಾಗೂ ವೈವಾಹಿಕ ಸಮಸ್ಯೆಗಳು ಇದಕ್ಕೆ ಕಾರಣ ಎನ್ನಲಾಗಿದೆ.
ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಉಗ್ರರ ನಿಗ್ರಹ ಪಡೆಯಲ್ಲಿ ಧೀರ್ಘಕಾಲದಲ್ಲಿ ನಿಯೋಜಿತರಾಗುವ ಸೈನಿಕರು ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ. ಕಡಿಮೆ ವೇತನ, ಮೂಲಸೌಕರ್ಯಗಳ ಕೊರತೆ, ರಜೆ ನಿರಾಕರಣೆ ಹಾಗೂ ಅಧಿಕಾರಿಗಳ ನಾಯಕತ್ವದ ಕೊರತೆ ಕೂಡಾ ಇದಕ್ಕೆ ಕಾರಣವಾಗುತ್ತಿದೆ.