ಶಿಶುಕಳ್ಳಿ ಸಿಕ್ಕಿಬಿದ್ದಳು:ಹೆತ್ತವರ ಮಡಿಲು ಸೇರಿದ ಶಿಶು

ಕೊಯಂಚೇರಿ,ಮಾ.11:ಜಿಲ್ಲಾ ಆಸ್ಪತ್ರೆಯಿಂದ ಅಪಹರಿಸಲಾಗಿದ್ದ ನವಜಾತ ಶಿಶು ಅದರ ತಂದೆ,ತಾಯಿಗಳ ಸುಪರ್ದಿಗೆ ಮರಳಿದೆ. ಕದ್ದುಕೊಂಡು ಹೋಗಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಯಿಂದ ಮಗುವನ್ನು ಎಗರಿಸಿದ ರಾನ್ನಿ ವೆಚ್ಚುಚ್ಚಿರ ಪುರತ್ತುಪುರಕ್ಕಲ್ ಅನಿಷ್‌ರ ಪತ್ನಿ ಲೀನಾ(36) ಮಕ್ಕಳಿಲ್ಲದ ಜಿಗುಪ್ಸೆಯಲ್ಲಿ ಆಸ್ಪತ್ರೆಯಿಂದ ಮಗುವನ್ನು ಅಪಹರಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ನಿನ್ನೆ ರಾತ್ರಿ 8:30ಕ್ಕೆ ಕೋಯಂಚೇರಿ ಜಿಲ್ಲಾಸ್ಪತ್ರೆಗೆ ಮಗುವನ್ನು ತಂದು ತಂದೆತಾಯಿಗಳಿಗೆ ಒಪ್ಪಿಸಲಾಯಿತು. ಈಗ ಜಿಲ್ಲಾಸ್ಪತ್ರೆಯ ವಿಶೇಷ ಉಪಚಾರದಲ್ಲಿ ಮಗುವನ್ನು ಇರಿಸಲಾಗಿದೆ. ಗುರುವಾರ ಬೆಳಗ್ಗೆ 11:10ಕ್ಕೆ ಸಜಿ ಅನಿತಾ ದಂಪತಿಗಳ ನಾಲ್ಕುದಿವಸದ ಗಂಡು ಮಗುವನ್ನು ಲೀನಾ ಅಪಹರಿಸಿದ್ದಳು, ಮಗು ಅಪಹರಣವಾಗಿದೆ ಎಂದು ಅರಿವಾದೊಡನೆ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದರು.
ಡಿವೈಎಸ್ಪಿ ವಿದ್ಯಾಧರನ್‌ರ ನೇತೃತ್ವದ ಪೊಲೀಸರ ತಂಡ ಆಸ್ಪತ್ರೆಯ 16 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಅದರಲ್ಲಿದ್ದ ದೃಶ್ಯಗಳ ಆಧಾರದಲ್ಲಿ ಮಗುವನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸುಲಭವಾಗಿದೆ. ಮೂವತ್ತು ಪೊಲೀಸರ ತಂಡ ಮಗು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತೆಂದು ವರದಿ ತಿಳಿಸಿದೆ.