ಓಲೈಕೆಯ ರಾಜಕಾರಣದ ವಿರುದ್ಧ ಜನತೆಯ ತೀರ್ಪು: ಯೋಗಿ ಆದಿತ್ಯನಾಥ್

ಗೋರಖ್‌ಪುರ, ಮಾ.11: ‘‘ಉತ್ತರಪ್ರದೇಶದ ಜನತೆ ಬಿಜೆಪಿಗೆ ಭಾರೀ ಬಹುಮತ ನೀಡುವ ಮೂಲಕ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಹುಜನ ಸಮಾಜವಾದಿ ಪಕ್ಷದ ಅಲ್ಪ ಸಂಖ್ಯಾತರ ಓಲೈಕೆಯ ರಾಜಕಾರಣದ ವಿರುದ್ಧ ತೀರ್ಪು ನೀಡಿದ್ದಾರೆ’’ ಎಂದು ಬಿಜೆಪಿಯ ಸಂಸದ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
‘‘ಬಿಜೆಪಿಯ ಚುನಾವಣೆಯ ಪ್ರಚಾರ ಸಂಪೂರ್ಣವಾಗಿ ಧನಾತ್ಮಕವಾಗಿತ್ತು. ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಎಸ್ಪಿ ಪಕ್ಷಗಳು ಮುಸ್ಲಿಮರ ಓಲೈಕೆಯತ್ತಲೇ ಹೆಚ್ಚು ಗಮನ ನೀಡಿವೆ. ಇಂದಿನ ಅಸೆಂಬ್ಲಿ ಫಲಿತಾಂಶ ಓಲೈಕೆಯ ರಾಜಕಾರಣವನ್ನು ಜನತೆ ತಿರಸ್ಕರಿಸಿದ್ದಾರೆ ಎಂದು ತೋರಿಸುತ್ತಿದೆ’’ ಎಂದು ಹೇಳಿದರು.
ಶೀಘ್ರವೇ ರಾಮಮಂದಿರ ನಿರ್ಮಾಣವಾಗಲಿದೆ:
ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡ ತಕ್ಷಣ ಬಹುಚರ್ಚಿತ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ಆದಿತ್ಯನಾಥ್ ಘೋಷಿಸಿದರು.
‘‘ರಾಮಮಂದಿರ ನಮ್ಮ ಕಾರ್ಯಸೂಚಿಯಲ್ಲಿರುವ ಪ್ರಮುಖ ವಿಷಯ. ನಾವು ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಯನ್ನು ಈಡೇರಿಸಲಿದ್ದೇವೆ’’ ಎಂದು ಆದಿತ್ಯನಾಥ್ ತಿಳಿಸಿದರು.





