ಬಿಜೆಪಿ ಎಲೆಕ್ಟ್ರಾನಿಕ್ ಮತಯಂತ್ರ ತಿರುಚಿದೆ, ಮತಪತ್ರ ಬಳಸಿ ಮರುಚುನಾವಣೆ ಆಗಲಿ: ಮಾಯಾವತಿ

ಲಕ್ನೋ,ಮಾ.11: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಹೀನಾಯ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು, ಮತಯಂತ್ರಗಳಲ್ಲಿ ಬಿಜೆಪಿಯ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಮತಪತ್ರಗಳ ಮೂಲಕ ಹೊಸದಾಗಿ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗವನ್ನು ಅವರು ಆಗ್ರಹಿಸಿದ್ದಾರೆ. ಶನಿವಾರ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಭಾರೀ ಗೆಲುವಿನೊಂದಿಗೆ ಸರಕಾರ ರಚಿಸಲು ಸಜ್ಜಾಗಿದೆ.
ಮತದಾನವನ್ನು ತಿರುಚಲಾಗಿದೆ ಮತ್ತು ಬಿಜೆಪಿ ಕಾರ್ಯಕರ್ತರು ಮತದಾನ ಯಂತ್ರಗಳಲ್ಲಿ ಕೈವಾಡ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಹೊಸದಾಗಿ ಚುನಾವಣೆಗೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಈ ಚುನಾವಣಾ ಫಲಿತಾಂಶಗಳು ಅಚ್ಚರಿಯನ್ನು ಮೂಡಿಸಿವೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಜನರಲ್ಲಿದ್ದ ವಿಶ್ವಾಸಕ್ಕೆ ಭಂಗವುಂಟಾಗಿದೆ. ಜನರಲ್ಲಿ ಇನ್ನು ಈ ವಿಶ್ವಾಸವುಳಿದಿಲ್ಲ. ಇದು ಪ್ರಜಾಫ್ರಭುತ್ವದ ಮೇಲಿನ ದಾಳಿಯಾಗಿದೆ. ಬಿಜೆಪಿಗೆ ಜನರು ಮತಗಳನ್ನೇ ಹಾಕಿರದ ಪ್ರದೇಶಗಳಲ್ಲಿಯೂ ಅದು ಗೆಲುವು ಸಾಧಿಸಿದೆ ಎಂದು ತನ್ನ ಮೂಲಗಳು ವರದಿ ಮಾಡಿವೆ ಎಂದರು.
ಮುಸ್ಲಿಮ್ ಪ್ರಾಬಲ್ಯದ ಪ್ರದೇಶಗಳಲ್ಲಿಯೂ ಬಿಜೆಪಿ ಗೆದ್ದಿರುವುದು ಮತಯಂತ್ರಗಳಲ್ಲಿ ದೋಷವಿತ್ತು ಎನ್ನುವುದನ್ನು ಬೆಟ್ಟುಮಾಡುತ್ತಿದೆ ಎಂದು ಒತ್ತಿ ಹೇಳಿದ ಮಾಯಾವತಿ ಅವರು, ಒಂದೇ ಮತಯಂತ್ರಗಳು ಬಿಜೆಪಿಯೇತರ ಮತಗಳನ್ನು ಸ್ವೀಕರಿಸಿಲ್ಲ ಅಥವಾ ಇತರ ಪಕ್ಷಗಳಿಗೆ ಹಾಕಿದ ಮತಗಳೂ ಬಿಜೆಪಿಗೇ ಹೋಗಿವೆ ಎಂದು ಆರೋಪಿಸಿದರು.