ಯುನಿವೆಫ್ ಕರ್ನಾಟಕ ಸದಸ್ಯತ್ವ ಅಭಿಯಾನದ ಉದ್ಘಾಟನೆ

ಮಂಗಳೂರು, ಮಾ,11: 'ನವಯುಗದ ಸಾರಥಿ ಯುನಿವೆಫ್' ಎಂಬ ವಿಷಯದಲ್ಲಿ ಮಾರ್ಚ್ 7 ರಿಂದ ಎಪ್ರಿಲ್ 7 ರ ತನಕ ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಮಾರಂಭವು ಪಳ್ನೀರ್‌ನ ದಾರುಲ್ ಇಲ್ಮ್ ಮದ್ರಸ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫಿ ಉದ್ದೀನ್ ಕುದ್ರೋಳಿ, ಭಾರತದ ಮುಸ್ಲಿಮರ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ವಿವರಿಸಿ, ಸಮುದಾಯದ ಬಗ್ಗೆ ಯುವಕರ ಹೊಣೆಗಾರಿಕೆಗಳನ್ನು ವಿವರಿಸಿದರು. ಯುನಿವೆಫ್ ಕರ್ನಾಟಕ ಸಮುದಾಯದ ಆಶಾಕಿರಣವಾಗಿ ಬೆಳೆದು ಬರುತ್ತಿದ್ದು ಸಮುದಾಯದ ಸಬಲೀಕರಣಕ್ಕಾಗಿ ವೈಚಾರಿಕ ಏಕತೆಯನ್ನು ರೂಪಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಯುವಕರು ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಪ್ರಜ್ಞಾವಂತರಾಗಬೇಕೆಂದು ಕರೆಯಿತ್ತರು.
ಬಳಿಕ ಯುವಕರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಯುವಕರು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡರು.
ಈ ಅಭಿಯಾನದ ಸಂಚಾಲಕ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹ ಸಂಚಾಲಕ ಅಡ್ವೊಕೇಟ್ ಸಿರಾಜುದ್ದೀನ್ ಸ್ವಾಗತಿಸಿದರು. ಯೂನುಸ್ ಪರ್ವೇರ್ ಕಿರ್‌ಅತ್ ಪಠಿಸಿದರು. ಸಬೀಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.





