ಜಾತ್ಯತೀತ ಮತಗಳ ವಿಭಜನೆಯೇ ಬಿಜೆಪಿ ಗೆಲುವಿಗೆ ಕಾರಣ: ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ

ಕಾಸರಗೋಡು, ಮಾ.11: ಉತ್ತರಪ್ರದೇಶದಲ್ಲಿ ಬಿಜೆಪಿಯ ಗೆಲುವಿಗೆ ಜಾತ್ಯತೀತ ಮತಗಳ ವಿಭಜನೆ ಕಾರಣ ಎಂದು ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅಭಿಪ್ರಾಯಪಟ್ಟರು.
ಅವರು ಶನಿವಾರ ಕಾಸರಗೋಡು ಸರಕಾರಿ ಅತಿಥಿ ಗ್ರಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಉತ್ತರಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಎದ್ದುಕಾಣುತ್ತಿತ್ತು. ಜಾತ್ಯತೀತ ಪಕ್ಷಗಳು ಒಗ್ಗಾಟ್ಟಾಗುತ್ತಿದ್ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಜಾತ್ಯತೀತ ಪಕ್ಷಗಳು ಒಗ್ಗಟ್ಟಾಗಬೇಕೆಂಬ ಸಂದೇಶ ಈ ಚುನಾವಣಾ ನೀಡುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಚೆನ್ನಿತ್ತಲ ಹೇಳಿದರು.
ಪ್ರಭಾಕರನ್ ಆಯೋಗದ ಶಿಫಾರಸಸ್ಸಿನಂತೆ ಕಾಸರಗೋಡು ಜಿಲ್ಲೆಗೆ ಮುಂಗಡ ಪತ್ರದಲ್ಲಿ 200 ಕೋಟಿ ರೂ. ಮಂಜೂರುಗೊಳಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಕೇವಲ 90 ಕೋಟಿ ರೂ. ಮಾತ್ರ ಒದಗಿಸಲಾಗಿದೆ. ಇದನ್ನು ಹೆಚ್ಚಿಸುವಂತೆ ಮತ್ತೆ ಒತ್ತಾಯಿಸಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರಿಗೆ 60 ಕೋಟಿ ರೂ. ಅಗತ್ಯ ಇದ್ದರೂ ಹತ್ತು ಕೋಟಿ ರೂ .ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು .
ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕುನ್ನಿಲ್, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು







