‘ಉತ್ತರ’ ಗೆದ್ದ ಮೋದಿಯಿಂದ ಶೀಘ್ರ ಈ ನಾಲ್ಕು ಮಹತ್ವದ ನಿರ್ಧಾರಗಳು...?

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಪ್ರಧಾನಿ ನರೇಂದ್ರ ಮೋದಿಯವರನ್ನು ಇನ್ನಷ್ಟು ಹುರಿದುಂಬಿಸಲಿದೆ ಮತ್ತು ಅಪಾಯವನ್ನು ಎದುರು ಹಾಕಿಕೊಳ್ಳುವ ಅವರ ಪ್ರವೃತ್ತಿಯನ್ನು ಪುನಃಶ್ಚೇತನಗೊಳಿಸಲಿದೆ.
ಈ ಜಯದೊಂದಿಗೆ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ಮೋದಿಯವರು ರಾಜ್ಯದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವುದು ಮಾತ್ರವಲ್ಲ, ನ.8ರ ನೋಟು ಅಮಾನ್ಯ ಕ್ರಮದ ಕುರಿತು ಜನಾಭಿಪ್ರಾಯ ಸಂಗ್ರಹವೆಂದೇ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದ ಚುನಾವಣೆಯನ್ನು ಗೆದ್ದಿದ್ದಾರೆ ಮತ್ತು ಆ ಕ್ರಮ ಸರಿಯಾಗಿತ್ತು ಎಂದು ತನ್ನದೇ ರೀತಿಯಲ್ಲಿ ಸಾಬೀತುಗೊಳಿಸಿದ್ದಾರೆ.
ಈ ವಿಜಯವು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ತನ್ನ ಉಳಿದಿರುವ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಇನ್ನಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಮೋದಿ ತೆಗೆದುಕೊಳ್ಳಬಹುದಾದ ನಾಲ್ಕು ದಿಟ್ಟ ಉಪಕ್ರಮಗಳಿಲ್ಲಿವೆ.
►ಕಾರ್ಮಿಕ ಸುಧಾರಣೆ
ಕಾರ್ಮಿಕ ವಲಯದಲ್ಲಿ ನಿರ್ಬಾಧಿತ ಪರಿವರ್ತನೀಯತೆಗಾಗಿ ಮತ್ತು ಹೆಚ್ಚೆಚ್ಚು ಮಹಿಳೆಯರು ಉದ್ಯೋಗಕ್ಕೆ ಸೇರಿಕೊಂಡು ಸ್ವಾವಲಂಬಿಗಳಾಗುವಂತೆ ಹುರುದುಂಬಿ ಸಲು ಗುತ್ತಿಗೆ ಕಾರ್ಮಿಕ ಕಾನೂನುಗಳು ಮತ್ತು ಫ್ಯಾಕ್ಟರಿಗಳ ಕಾನೂನಿಗೆ ತಿದ್ದುಪಡಿಗಳನ್ನು ತರಲು ಮೋದಿ ಮುಂದಾಗಬಹುದು.
►ಭ್ರಷ್ಟಾಚಾರ ನಿಗ್ರಹ
ಅಕ್ರಮ ಸಂಪತ್ತಿನ ವಿರುದ್ಧ ತನ್ನ ಅಭಿಯಾನಕ್ಕೆ ಮೋದಿ ಮತ್ತೆ ಚಾಲನೆ ನೀಡುವ ಸಾಧ್ಯತೆಗಳಿವೆ. 500 ಮತ್ತು 1,000 ರೂ.ನೋಟುಗಳ ರದ್ದತಿಯ ಬಳಿಕ ಹೊಸದಾಗಿ ರೂಪುಗೊಂಡಿರುವ ಬೇನಾಮಿ ಕಾಯ್ದೆಯ ಅನುಷ್ಠಾನದ ಮೇಲೆ ಅವರು ಗಮನವನ್ನು ಕೇಂದ್ರೀಕರಿಸಬಹುದು.
►ಆಡಳಿತ
ಆಡಳಿತ ಸುಧಾರಣೆಗಳನ್ನು ತ್ವರಿತಗೊಳಿಸಲು, ಅದರಲ್ಲಿಯೂ ಸೋರಿಕೆಯನ್ನು ತಡೆಗಟ್ಟಲು ವಿವಿಧ ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಆಧಾರ ಬಳಕೆಯನ್ನು ವ್ಯಾಪಕವಾಗಿಸಲು ಸರಕಾರವು ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ.
►ಭೂ ಸ್ವಾಧೀನ
ಗೆಲುವಿನ ಹಿನ್ನೆಲೆಯಲ್ಲಿ ಮೋದಿಯವರು ಕಗ್ಗಂಟಾಗಿರುವ ಭೂ ಸ್ವಾಧೀನ ವಿಷಯವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವುದನ್ನು ಪರಿಶೀಲಿಸಬಹುದು. ಅಂದರೆ ಅವರು ತನ್ನ ವೈಯಕ್ತಿಕ ಮತ್ತು ರಾಜಕೀಯ ಬಂಡವಳವನ್ನು ಪಣಕ್ಕೊಡ್ಡುತ್ತಿದ್ದಾರೆ ಎಂದೇ ಅರ್ಥ. ನ.8ರಂದೂ ಇದೇ ದಿಟ್ಟತನದೊಂದಿಗೆ ನೋಟು ಅಮಾನ್ಯವನ್ನು ಪ್ರಕಟಿಸಿದ್ದ ಅವರು ಇಂದು ಅದರ ಲಾಭವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿದ್ದಾರೆ.