ಮುಸ್ಲಿಮರ ಬೆಂಬಲದಿಂದ ಮೂರು ಬಾರಿಯ ಶಾಸಕನನ್ನು ಸೋಲಿಸಿ ಗೆದ್ದ ಬಿಜೆಪಿಯ ಧೀರೇಂದ್ರ ಸಿಂಗ್

ಲಕ್ನೊ, ಮಾ.11: ಉತ್ತರ ಪ್ರದೇಶ ಚುನಾವಣೆಯಲ್ಲಿ ಮೋದಿ ಅಲೆಯ ಲಾಭ ಪಡೆದ ಬಿಜೆಪಿ ಅಭ್ಯರ್ಥಿ ಠಾಕುರ್ ಧೀರೇಂದ್ರ ಸಿಂಗ್ ಅವರು ಜೇವಾರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ನಿಕಟ ಸ್ಪರ್ಧಿ ಬಿಎಸ್ಪಿಯ ಮೂರು ಬಾರಿಯ ಶಾಸಕ ವೆದ್ರಂ ಭಾಟಿ ಅವರನ್ನು 22,173 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಿಂಗ್ 1,02,979 ಮತ ಪಡೆದರೆ, ಭಾಟಿ 80,806 ಮತ್ತು ಎಸ್ಪಿಯ ನರೇಂದರ್ ನಾಗರ್ 13,239 ಮತಗಳನ್ನು ಪಡೆದಿದ್ದಾರೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಧೀರೇಂದ್ರ ಸಿಂಗ್, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿಲ್ಪಟ್ಟ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ರಜಪೂತ್ ಸಮುದಾಯದವರಾದ ಸಿಂಗ್ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಬೆಂಬಲ ಪಡೆದಿದ್ದರೆ, ಇವರ ಎದುರಾಳಿ ಭಾತಿ ಗುಜ್ಜಾರ್ ಸಮುದಾಯದವರ ಒಲವು ಗಳಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿಂಗ್ ಅವರು ಭಾತಿ ಎದುರು 9 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಹಿರಿಯ ರಾಜಕಾರಣಿ ಸಿಂಗ್ ಅವರು ಇದೇ ಪ್ರಪಥಮ ಬಾರಿಗೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಭಾಟ್ಟ ಪರ್ಸೋಲ್ ಗ್ರಾಮದಲ್ಲಿ 2010ರಲ್ಲಿ ನಡೆದಿದ್ದ ರೈತರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಂಗ್, ಅಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ತಮ್ಮ ಬೈಕ್‌ನಲ್ಲಿ ಕುಳ್ಳಿರಿಸಿ ಗ್ರಾಮಕ್ಕೆ ಕರೆತರುವ ಮೂಲಕ ಸುದ್ದಿ ಮಾಡಿದ್ದರು.