ರಿಯಾದ್: 'ಮೆಹೆಫಿಲೆ ಮೊಹಬ್ಬತ್' ಕಾರ್ಯಕ್ರಮ

ರಿಯಾದ್, ಮಾ.11: ಅಲ್ ಖಾದಿಸ ಎಜ್ಯುಕೇಶನಲ್ ಅಕಾಡಮಿ ಕಾವಳಕಟ್ಟೆ ರಿಯಾದ್ ಸಮಿತಿ ವತಿಯಿಂದ ಮಾರ್ಚ್ 10ರಂದು ಶುಕ್ರವಾರ ಜುಮಾ ಬಳಿಕ ರಿಯಾದ್ ನ ಸಭಾಂಗಣವೊಂದರಲ್ಲಿ 'ಮೆಹಫಿಲೇ ಮೊಹಬ್ಬತ್' ಕಾರ್ಯಕ್ರಮ ಜರಗಿತು.
ಡಾ. ಮುಹಮ್ಮದ್ ಫಾಝಿಲ್ ರಝ್ವಿ(ಹಝ್ರತ್) ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಲ್ ಖಾದಿಸ ರಿಯಾದ್ ಸಮಿತಿಯ ಸಲಹೆಗಾರರಾದ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇವಲ 4 ವರ್ಷಗಳಲ್ಲಿ 30 ಎಕರೆಯಷ್ಟು ವಿಶಾಲವಾದ ಸ್ಥಳವನ್ನು ಖರೀದಿಸಲು ಸಹಕರಿಸಿದ ದಾನಿಗಳನ್ನು ಶ್ಲಾಘಿಸಿದರು. ಹಾಗೂ ಅಲ್ ಖಾದಿಸ ನಡೆಸಲು ಉದ್ದೇಶಿಸಿರುವ ಹಲವಾರು ಯೋಜನೆಯ ಬಗ್ಗೆ ಇದೇ ಸಂದರ್ಭದಲ್ಲಿ ಸಭಿಕರಿಗೆ ವಿವರಿಸಿದರು. ತದನಂತರ ಹಝ್ರತ್ ರವರಿಗೆ ರಿಯಾದ್ ಸಮಿತಿ ವತಿಯಿಂದ ಗೌರವಾರ್ಪಣೆ ನೀಡಲಾಯಿತು.
ಅಧ್ಯಕ್ಷ ಭಾಷಣ ಮಾಡಿದ ಅಲ್ ಖಾದಿಸದ ರೂವಾರಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ, ಕಾವಳಕಟ್ಟೆ ಅಲ್ ಖಾದಿಸದ ಭವಿಷ್ಯದ ಕನಸಿನ ಯೋಜನೆಯಾದ ನಿರ್ಗತಿಕ ಹಾಗೂ ಬಡವರಿಗೆ ನೀಡಲು ಉದ್ದೇಶಿಸಿರುವ 200 ಉಚಿತ ಮನೆ ಹಾಗೂ ಇತರ ಯೋಜನೆಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕೆಂದು ಹೇಳಿದರು.
ನಂತರ ಅಲ್ ಖಾದಿಸ ಸ್ಥಾಪಕ ಸದಸ್ಯರಲ್ಲೊಬ್ಬರಾದ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಉಸ್ತಾದರನ್ನು ಹಝ್ರತ್ ರವರು ಸನ್ಮಾನಿಸಿದರು.
ವೇದಿಕೆಯಲ್ಲಿ ಅಲ್ ಖಾದಿಸ ರಿಯಾದ್ ಅಧ್ಯಕ್ಷ ಇಸ್ಮಾಯಿಲ್ ಕನ್ನಂಗಾರ್, ದಮಾಮ್ ಅಧ್ಯಕ್ಷ ಅಬೂಬಕರ್ ಪಡುಬಿದ್ರಿ, ನಝೀರ್ ಕಾಶಿಪಟ್ನ, ಖಾಸಿಂ ಉಜಿರೆ, ಅಬೂಬಕರ್ ಸಾಲೆತ್ತೂರು, ಮುಹಮ್ಮದ್ ಸಿತಾರ್, ಅಝೀಝ್ ಬಜ್ಪೆ, ಇಸ್ಮಾಯಿಲ್ ಜೋಗಿಬೆಟ್ಟು ಹಾಗೂ ಯುವ ಉದ್ಯಮಿ ಸರ್ಫಾಝ್ ಪಡುಬಿದ್ರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಅಬ್ದುಲ್ ರಶೀದ್ ಮದನಿ ಉರುವಾಲುಪದವು ಕಿರಾಅತ್ ಪಠಿಸಿದರು, ಅಲ್ ಖಾದಿಸ ರಿಯಾದ್ ಸಮಿತಿ ಪ್ರ.ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್ ಸ್ವಾಗತ ಮಾಡಿದರು. ಅಲ್ ಖಾದಿಸ ಆರ್ಗನೈಸರ್ ಅಬೂಬಕರ್ ಸಿದ್ದೀಕ್ ನಿಝಾಮಿ ಕಾರ್ಯಕ್ರಮವನ್ನು ನಿರೂಪಿಸಿದರು. ನವಾಝ್ ಚಿಕ್ಕಮಗಳೂರು ವಂದಿಸಿದರು.







