ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಅಲಿ ಜೂನಿಯರ್ ಮತ್ತೆ ಬಂಧನ

ವಾಶಿಂಗ್ಟನ್, ಮಾ. 11: ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿಯ ಮಗ ಮುಹಮ್ಮದ್ ಅಲಿ ಜೂನಿಯರ್‌ರನ್ನು ವಾಶಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಪ್ರಶ್ನಿಸಲಾಗಿದೆ ಎಂದು ಅವರ ವಕೀಲ ಶುಕ್ರವಾರ ತಿಳಿಸಿದರು. ಇದು ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದು ಎರಡನೆ ಬಾರಿಯಾಗಿದೆ.
ಕಳೆದ ತಿಂಗಳಲ್ಲಿಯೂ ಇಂಥದೇ ಘಟನೆ ನಡೆದಿದ್ದು, ಅವರನ್ನು ಬಂಧಿಸಿ ಪ್ರಶ್ನಿಸಲಾಗಿತ್ತು. ಆ ಘಟನೆಯ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ ಬಳಿಕ, ಫೋರ್ಟ್ ಲಾಡರ್‌ಡೇಲ್‌ಗೆ ವಾಪಾಸಾಗಲು ಹೋಗುತ್ತಿದ್ದಾಗ ಅವರನ್ನು ಎರಡನೆ ಬಾರಿ ತಡೆಯಲಾಗಿದೆ.
ಅಲಿ ಮತ್ತು ಅವರ ತಾಯಿ ಖಲೀಲಾ ಕಮಾಚೊ ಅಲಿ ಫೆಬ್ರವರಿ 7ರಂದು ಜಮೈಕದಿಂದ ವಾಪಸಾಗುತ್ತಿದ್ದಾಗ ಫೋರ್ಟ್ ಲಾಡರ್‌ಡೇಲ್ ಹಾಲಿವುಡ್ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಯಲಾಗಿತ್ತು. ಆ ಘಟನೆಯ ಬಗ್ಗೆ ಕಾಂಗ್ರೆಸ್ ಉಪಸಮಿತಿಯೊಂದರ ಸದಸ್ಯರ ಜೊತೆ ಮಾತನಾಡುವುದಕ್ಕಾಗಿ ಅಲಿ ಬುಧವಾರ ವಾಶಿಂಗ್ಟನ್‌ಗೆ ಪ್ರಯಾಣಿಸಿದ್ದರು. ಹೋಗುವಾಗ ಯಾವುದೇ ಸಮಸ್ಯೆ ಎದುರಾಗಲಿಲ್ಲ.
ಆದರೆ, ಮಾತುಕತೆಯ ಬಳಿಕ ಫ್ಲೋರಿಡದಲ್ಲಿರುವ ಮನೆಗೆ ಹಿಂದಿರುಗಲು ಜೆಟ್‌ಏರ್‌ವೇಸ್ ಬ್ಲೂ ವಿಮಾನವೇರಲು ಹೋದಾಗ ತನ್ನ ಕಕ್ಷಿದಾರನನ್ನು 20 ನಿಮಿಷಗಳ ಕಾಲ ಬಂಧಿಸಿಡಲಾಯಿತು ಎಂದು ವಕೀಲ ಕ್ರಿಸ್ ಮ್ಯಾನ್ಸಿನಿ ಹೇಳಿದರು.
ಅಲಿ ಆಂತರಿಕ ಇಲಾಖೆಯ ಭದ್ರತಾ ಅಧಿಕಾರಿಗಳೊಂದಿಗೆ ಟೆಲಿಫೋನ್‌ನಲ್ಲಿ ಮಾತನಾಡಿದರು ಹಾಗೂ ತನ್ನ ಚಾಲನಾ ಪರವಾನಿಗೆ ಮತ್ತು ಪಾಸ್‌ಪೋರ್ಟ್‌ಗಳನ್ನು ಅಧಿಕಾರಿಗಳಿಗೆ ತೋರಿಸಿದರು. ಬಳಿಕ ಅವರಿಗೆ ವಿಮಾನವೇರಲು ಅವಕಾಶ ನೀಡಲಾಯಿತು.
ಅಲಿ ಧರಿಸಿದ ಒಡವೆಗಳು ತಪಾಸಣಾ ಸ್ಕಾನರ್‌ನಲ್ಲಿ ಎಚ್ಚರಿಕೆ ಗಂಟೆಯನ್ನು ಮೊಳಗಿಸಿದ ಬಳಿಕ ಅವರನ್ನು ತಪಾಸಣೆ ನಡೆಸಲಾಯಿತು ಎಂದು ಆಂತರಿಕ ಇಲಾಖೆಯ ವಕ್ತಾರೆಯೊಬ್ಬರು ತಿಳಿಸಿದರು.







