ಪುತ್ತೂರು: ಮಹಿಳೆಯರಿಗೆ ಮೆಣಸಿನ ಹುಡಿ ಎರಚಿ 30 ಪವನ್ ಚಿನ್ನಾಭರಣ ದರೋಡೆ

ಪುತ್ತೂರು, ಮಾ.11: ತಾರಸಿ ಮನೆಯ ಮೇಲ್ಚಾಚಣಿಯ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿದ್ದ ಮುಸುಕುಧಾರಿಯೊಬ್ಬ ಮನೆಯೊಳಗಿದ್ದ ಮಹಿಳೆಯರಿಗೆ ಮೆಣಸಿನ ಹುಡಿ ಎರಚಿ ,ಕತ್ತಿ ಹಿಡಿದು ಬೆದರಿಸಿ ಅಪಾರ ಮೌಲ್ಯದ ಚಿನ್ನಾಭರಣ ದರೋಡೆಗೈದ ಘಟನೆಯೊಂದು ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದ ಪಂಚಲಿಂಗೇಶ್ವರ ದೇವಾಲಯ ಸಮೀಪ ಶನಿವಾರ ಮುಂಜಾನೆ ಸಂಭವಿಸಿದೆ.
ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿರುವ ಹಸನ್ ಯಾನೆ ಹಸೈನಾರ್ ಎಂಬವರಿಗೆ ಸೇರಿದ, ಅವರ ಪತ್ನಿ ಹಾಗೂ ಮಕ್ಕಳು ವಾಸ್ತವ್ಯವಿರುವ ಮನೆಯಲ್ಲಿ ಈ ದರೋಡೆ ಘಟನೆ ಶನಿವಾರ ಮುಂಜಾನೆ 6ರಿಂದ 6:15ರ ನಡುವೆ ನಡೆದಿದೆ.
ಸುಮಾರು 30 ಪವನ್ ಚಿನ್ನಾಭರಣವನ್ನು ದರೋಡೆಗೈಯಲಾಗಿದೆ. ಮನೆಯ ಯಜಮಾನ ಹಸನ್ ಅವರು ಗಲ್ಫ್‌ನಲ್ಲಿದ್ದಾರೆ. ಈಶ್ವರಮಂಗಲ-ಪಳ್ಳತ್ತೂರು ರಸ್ತೆ ಬದಿಯಲ್ಲಿಯೇ ಇರುವ ಈ ಮನೆಯಲ್ಲಿ ಹಸನ್ ಅವರ ಪತ್ನಿ ಪೌಜಿಯಾ, ಅವರ ಮಕ್ಕಳಾದ ಅಸೀನಾ ಮತ್ತು ಅಸ್ತ್ರಿನಾ ಅವರು ವಾಸ್ತವ್ಯವಿದ್ದು, ಈ ಮೂರು ಮಂದಿ ಮನೆಯ ಕೋಣೆಯೊಂದರಲ್ಲಿ ಮಲಗಿದ್ದರು.
ಶನಿವಾರ ಬೆಳಗ್ಗೆ ಅವರು ಬೆಡ್ ರೂಮಿನಿಂದ ಹೊರಬರುತ್ತಿದ್ದಂತೆಯೇ ಎದುರು ಪ್ರತ್ಯಕ್ಷನಾಗಿದ್ದ ಮುಸುಕುಧಾರಿ ದರೋಡೆಕೋರನೊಬ್ಬ ಅವರ ಮೇಲೆ ಮೆಣಸಿನ ಹುಡಿ ಎರಚಿ, ಕತ್ತಿ ಹಿಡಿದು ಬೊಬ್ಬೆ ಹೊಡೆದರೆ ಹಾಗೂ ಚಿನ್ನಾಭರಣಗಳನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಅಸ್ತ್ರಿನಾ ಅವರ ಮೈಮೇಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿರುವುದಾಗಿ ದೂರಲಾಗಿದೆ.
ದರೋಡೆಕೋರ ಕತ್ತಿ ಹಿಡಿದು ಕಪಾಟಿನಲ್ಲಿರಿಸಿರುವ ಚಿನ್ನಾಭರಣಗಳನ್ನು ತೆಗೆದು ನೀಡದಿದ್ದಲ್ಲಿ ಕೊಲೆಗೈಯುವುದಾಗಿ ಬೆದರಿಸಿದ ಕಾರಣ ಮನೆಯಲ್ಲಿದ್ದ ಮೂವರು ಮಹಿಳೆಯರು ಬೆದರಿ ಜೀವಭಯದಿಂದ ಮನೆಯ ಕೋಣೆಯೊಂದರಲ್ಲಿರುವ ಗೋದ್ರೇಜ್ ಕಪಾಟಿನಲ್ಲಿಟ್ಟಿದ್ದ ಜಿನ್ನಾಭರಣವನ್ನು ತೋರಿಸಿದ್ದು, ಅಲ್ಲಿದ್ದ ಚಿನ್ನಾಭರಣಗಳನ್ನು ಕಸಿದುಕೊಂಡ ದರೋಡೆಕೋರ ಬಳಿಕ ಬೊಬ್ಬೆ ಹೊಡೆಯದಂತೆ ಬೆದರಿಸುತ್ತಲೇ ಮನೆಯಿಂದ ಹೊರಹೋಗಿ ಬೈಕೊಂದರಲ್ಲಿ ಪಳ್ಳತ್ತೂರು ರಸ್ತೆಯಾಗಿ ಪರಾರಿಯಾಗಿರುವುದಾಗಿ ಮನೆ ಮಂದಿ ದೂರಿನಲ್ಲಿ ತಿಳಿಸಿದ್ದಾರೆ.
ಬಾಗಿಲು ಮುರಿದು ಕೃತ್ಯ:
ಪೌಜಿಯಾ ಅವರು ವಾಸ್ತವ್ಯವಿದ್ದ ಈ ಮನೆ ಆರ್‌ಸಿಸಿ (ತಾರಸಿ) ಮನೆಯಾಗಿದ್ದು, ತಾರಸಿಯ ಮೇಲ್ಛಾವಣಿಯಲ್ಲಿರುವ ಕೊಠಡಿಗೆ ಮನೆಯೊಳಗಿಂದ ಸ್ಟೆಪ್ ಅಳವಡಿಸಲಾಗಿದೆ. ಮನೆಗೆ ಅಳವಡಿಸಲಾಗಿದ್ದ ನೀರಿನ ಪೈಪ್‌ಲೈನ್ ಭಾಗದಲ್ಲಿ ನೀರಿನ ಪೈಬರ್ ಡ್ರಮ್‌ನ ಮೇಲೆ ಚೇರೊಂದನ್ನು ಇಟ್ಟು ನೀರಿನ ಪೈಪ್‌ಲೈನ್‌ನ ಗೇಟ್ ಹಾಲ್‌ನ ಮೇಲೆ ಕಾಲಿಟ್ಟು ತಾರಸಿ ಮೇಲೆ ಹತ್ತಿರುವ ದರೋಡೆಕೋರ ಕೊಠಡಿಯ ಬಾಗಿಲನ್ನು ಮುರಿದು ಸ್ಟೆಪ್‌ನ ಮೂಲಕ ಮನೆಯೊಳಗೆ ಇಳಿದು ಮನೆಮಂಂದಿ ಎದ್ದು ಬೆಡ್ ರೂಮಿನ ಬಾಗಿಲು ತೆಗೆಯುತ್ತಿದ್ದಂತೆಯೇ ಎದುರು ಪ್ರತ್ಯಕ್ಷನಾಗಿದ್ದ ದರೋಡೆಕೋರ ಮಲಯಾಳಿ ಭಾಷೆಯಲ್ಲಿ ಬೆದರಿಕೆಯೊಡ್ಡಿ ಈ ಕೃತ್ಯ ಎಸಗಿರುವುದಾಗಿ ಮನೆಮಂದಿ ತಿಳಿಸಿದ್ದಾರೆ.
ಚಿನ್ನಾಭರಣವನ್ನು ಎಗರಿಸಿಕೊಂಡ ದರೋಡೆಗೈದ ಬಳಿಕ ಸ್ಟೆಪ್ ಮೂಲಕವೇ ತಾರಸಿಗೆ ಹೋಗಿ ಅಲ್ಲಿಂದ ಕೆಳಗೆ ಬಿಗಿದು ಪರಾರಿಯಾಗಿರುವುದಾಗಿ ಮನೆಮಂದಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ. ಜಿಲ್ಲಾ ಎಸ್ಪಿ ಭೂಷನ್ ಗುಲಾಬ್ ರಾವ್ ಬೋರಸೆ, ಹೆಚ್ಚುವರಿ ಎಸ್ಪಿ ಡಾ.ವೇದಮೂರ್ತಿ,ಡಿವೈಎಸ್ಪಿ ಭಾಸ್ಕರ ರೈ, ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್‌ಕುಲಕರ್ಣಿ, ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ಅಮಾನುಲ್ಲಾ, ಸಂಪ್ಯ ಎಸ್‌ಐ ಅಬ್ದುಲ್ ಖಾದರ್, ಈಶ್ವರಮಂಗಲ ಹೊರಠಾಣೆಯ ಎಎಸ್‌ಐ ತಿಮ್ಮಪ್ಪ ಗೌಡ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿನ್ನದ ನೆಕ್ಲೇಸ್, ಚಿನ್ನದ ಸರ, ಕಿವಿ ಬೆಂಡೋಲೆಗಳು ಸೇರಿದಂತೆ ಸುಮಾರು 25ರಿಂದ 30 ಪವನ್ ಪವನ್ ಚಿನ್ನಾಭರಣ ಕಳವಾಗಿರುವುದಾಗಿ ಪೌಜಿಯಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಬ್ಲೇಡ್, ಉಳಿ ಪತ್ತೆ:
ಮನೆಯ ಬಳಿ ದಡೋಡೆಕೋರ ಬಾಗಿಲು ಮುರಿಯಲು ಬಳಸಿದ ಕಬ್ಬಿಣ ಕತ್ತರಿಸುವ ಬ್ಲೇಡ್ ಮತ್ತು ಕಬ್ಬಿಣದ ಉಳಿಯೊಂದು ಪತ್ತೆಯಾಗಿದೆ. ಮನೆಯೊಳಗೆ ಮೆಣಸಿನ ಹುಡಿ ಎರಚಿರುವುದು, ಹಾಗೂ ಮೆಣಸಿನ ಹುಡಿ ಪ್ಯಾಕೇಟ್ ಕಂಡು ಬಂದಿದೆ.







