ಪ್ರೀತ್ ಭರಾರ, ಇತರ ಅಟಾರ್ನಿಗಳ ರಾಜೀನಾಮೆಗೆ ಟ್ರಂಪ್ ಸೂಚನೆ

ವಾಶಿಂಗ್ಟನ್, ಮಾ. 11: ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೇಮಿಸಿರುವ 46 ಅಮೆರಿಕನ್ ಅಟಾರ್ನಿಗಳು ರಾಜೀನಾಮೆ ನೀಡಬೇಕೆಂದು ಡೊನಾಲ್ಡ್ ಟ್ರಂಪ್ ಆಡಳಿತ ಸೂಚಿಸಿದೆ. ಇದರಲ್ಲಿ ಭಾರತೀಯ ಅಮೆರಿಕನ್ ಪ್ರಾಸಿಕ್ಯೂಟರ್ ಪ್ರೀತ್ ಭರಾರ ಕೂಡ ಸೇರಿದ್ದಾರೆ.
ಅಮೆರಿಕದಲ್ಲಿ ಒಟ್ಟು 93 ಅಟಾರ್ನಿಗಳಿದ್ದಾರೆ. ಅವರ ಪೈಕಿ ಹೆಚ್ಚಿನವರು ಈಗಾಗಲೇ ತಮ್ಮ ಹುದ್ದೆಗಳನ್ನು ತೊರೆದಿದ್ದಾರೆ. ಆದರೆ, ಹುದ್ದೆಗಳಲ್ಲಿ ಮುಂದುವರಿದಿರುವ 46 ಅಟಾರ್ನಿಗಳು ‘ಸಮಾನ ಅಧಿಕಾರ ಹಸ್ತಾಂತರ’ಕ್ಕಾಗಿ ರಾಜೀನಾಮೆ ನೀಡಬೇಕೆಂದು ಅಮೆರಿಕದ ಅಟಾರ್ನಿ ಜನರಲ್ ಜೆಫ್ ಸೆಶನ್ಸ್ ಸೂಚಿಸಿದ್ದಾರೆ ಎಂದು ಕಾನೂನು ಇಲಾಖೆಯ ವಕ್ತಾರೆ ಸಾರಾ ಇಸ್ಗರ್ ಫ್ಲೋರ್ಸ್ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದರು.
ಈ ಕ್ರಮವನ್ನು ಸಮರ್ಥಿಸಿದ ಫ್ಲೋರ್ಸ್, ಜಾರ್ಜ್ ಡಬ್ಲು. ಬುಶ್ ಮತ್ತು ಬಿಲ್ ಕ್ಲಿಂಟನ್ ಸರಕಾರಗಳೂ ತಮ್ಮ ಆಳ್ವಿಕೆಯ ಪ್ರಾರಂಭದಲ್ಲಿ ಇಂಥ ಸೂಚನೆಗಳನ್ನು ನೀಡಿದ್ದವು ಎಂದು ಹೇಳಿದ್ದಾರೆ.
ರಾಜೀನಾಮೆ ನೀಡುವಂತೆ ಸೂಚಿಸಲ್ಪಟ್ಟವರಲ್ಲಿ ನ್ಯೂಯಾರ್ಕ್ ದಕ್ಷಿಣ ಜಿಲ್ಲೆಯ ಅಟಾರ್ನಿ ಜನರಲ್ ಭರಾರ ಸೇರಿದ್ದಾರೆ. ಅವರನ್ನು ಒಬಾಮ 2009ರಲ್ಲಿ ನೇಮಿಸಿದ್ದರು.
‘ಆಂದೋಲನದ ರೀತಿಯಲ್ಲಿ ಕಾರ್ಯನಿರ್ವಹಿಸುವ’ ಖ್ಯಾತಿಯನ್ನು ಪಡೆದಿರುವ ಭರಾರ, ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿಜಯ ಗಳಿಸಿದ ಬಳಿಕ ನವೆಂಬರ್‌ನಲ್ಲಿ ಅವರನ್ನು ಭೇಟಿಯಾಗಿದ್ದರು.
ಆ ಭೇಟಿಯ ವೇಳೆ, ಅಧಿಕಾರದಲ್ಲಿ ಮುಂದುವರಿಯುವಂತೆ ಅವರಿಗೆ ಟ್ರಂಪ್ ಸೂಚಿಸಿದ್ದರು ಎಂದು ಮಾಧ್ಯಮ ವರದಿಗಳು ಹೇಳಿದ್ದವು.
ವಿದೇಶಗಳಿಗೆ ಸಂಬಂಧಿಸಿದ ಪ್ರಕರಣಗಳು, ಇನ್‌ಸೈಡರ್ ಟ್ರೇಡಿಂಗ್ ಮತ್ತು ಅಮೆರಿಕದ ರಾಜಕಾರಣಿಗಳನ್ನು ಒಳಗೊಂಡ ಪ್ರಕರಣಗಳನ್ನು ನಿಭಾಯಿಸುವ ಮೂಲಕ 48 ವರ್ಷದ ಭರಾರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಖ್ಯಾತಿ ಪಡೆದಿದ್ದರು.







