ಒಂದು ಪ್ರಕರಣದಲ್ಲಿ ಟ್ರಂಪ್ ಮುಸ್ಲಿಮ್ ನಿಷೇಧ ಆದೇಶ ಜಾರಿಗೆ ತಡೆ

ವಾಶಿಂಗ್ಟನ್, ಮಾ. 11: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪರಿಷ್ಕೃತ ಮುಸ್ಲಿಮ್ ನಿಷೇಧ ಆದೇಶಕ್ಕೆ ಮೊದಲ ಮಹತ್ವದ ಕಾನೂನು ತಡೆ ಎದುರಾಗಿದೆ. ಈಗಾಗಲೇ ಅಮೆರಿಕದಲ್ಲಿ ಆಶ್ರಯ ನೀಡಲಾಗಿರುವ ಸಿರಿಯ ನಿರಾಶ್ರಿತರೊಬ್ಬರ ಪತ್ನಿ ಮತ್ತು ಮಗುವಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸುವ ಆದೇಶವನ್ನು ಅನುಷ್ಠಾನಗೊಳಿಸದಿರುವಂತೆ ವಿಸ್ಕಾನ್ಸಿನ್ ರಾಜ್ಯದ ಜಿಲ್ಲಾ ನ್ಯಾಯಾಧೀಶ ವಿಲಿಯಮ್ ಕಾನ್ಲಿ ಆದೇಶ ನೀಡಿದ್ದಾರೆ.
ಆದೇಶದ ಪಾಲನೆಯಾದರೆ ವಾದಿಯ ಪಾಲಿಗೆ ಸರಿಪಡಿಸಲಾಗದ ಹಾನಿಯಾಗುತ್ತದೆ ಎಂದು ಶುಕ್ರವಾರ ಮಧ್ಯಾಂತರ ಆದೇಶ ನೀಡಿದ ನ್ಯಾಯಾಧೀಶರು ಹೇಳಿದರು. ಆದಾಗ್ಯೂ, ಈ ಆದೇಶ ಈ ಪ್ರಕರಣದ ಸಿರಿಯ ನಿರಾಶ್ರಿತ ಮತ್ತು ಆತನ ಕುಟುಂಬಕ್ಕೆ ಮಾತ್ರ ಅನ್ವಯವಾಗುತ್ತದೆ.
ಪತ್ನಿ ಮತ್ತು ಮಗು ಈಗಲೂ ಯುದ್ಧಪೀಡಿತ ಅಲೆಪ್ಪೊದಲ್ಲಿರುವುದರಿಂದ ಸಿರಿಯ ನಿರಾಶ್ರಿತ ವ್ಯಕ್ತಿಯು ಅನಾಮಧೇಯರಾಗಿ ಉಳಿಯಲು ಬಯಸಿದ್ದಾರೆ.
ಸೋಮವಾರ ಜಾರಿಗೆ ಬಂದಿರುವ ನೂತನ ಆದೇಶವನು ಮಾರ್ಚ 16ರಂದು ಜಾರಿಗೆ ಬರಲಿದೆ.
ನೂತನ ಆದೇಶಕ್ಕೆ ತಕ್ಷಣ ತಡೆಯಿಲ್ಲ: ನ್ಯಾಯಾಧೀಶಡೊನಾಲ್ಡ್ ಟ್ರಂಪ್‌ರ ಮೂಲ ಮುಸ್ಲಿಮ್ ನಿಷೇಧ ಆದೇಶದ ರಾಷ್ಟ್ರವ್ಯಾಪಿ ಜಾರಿಗೆ ತಡೆಯಾಜ್ಞೆ ನೀಡಿರುವ ತನ್ನ ತೀರ್ಪು, ಪರಿಷ್ಕೃತ ಆದೇಶಕ್ಕೆ ಅನ್ವಯವಾಗುವುದೇ ಎನ್ನುವುದನ್ನು ತಕ್ಷಣ ನಿರ್ಧರಿಸಲು ತನಗೆ ಸಾಧ್ಯವಾಗುವುದಿಲ್ಲ ಎಂದು ಸಿಯಾಟಲ್‌ನ ಫೆಡರಲ್ ನ್ಯಾಯಾಧೀಶ ಜೇಮ್ಸ್ ರೋಬರ್ಟ್ ಶುಕ್ರವಾರ ಹೇಳಿದ್ದಾರೆ.
ಈ ವಿಷಯದಲ್ಲಿ ತಾನು ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮೊದಲು, ಪರಿಷ್ಕೃತ ಆದೇಶಕ್ಕೆ ಸಂಬಂಧಿಸಿದ ನಿರ್ಣಯಗಳು ಅಥವಾ ದೂರನ್ನು ಯಾರಾದರೂ ಸಲ್ಲಿಸಬೇಕಾಗುತ್ತದೆ ಎಂದು ಆದೇಶವೊಂದರಲ್ಲಿ ತಿಳಿಸಿದರು.
ವಾಶಿಂಗ್ಟನ್ ಮತ್ತು ಮಿನಸೋಟ ರಾಜ್ಯಗಳು ಮತ್ತು ಕಾನೂನು ಇಲಾಖೆ ಈವರೆಗೆ ನೋಟಿಸ್‌ಗಳನ್ನು ಮಾತ್ರ ಸಲ್ಲಿಸಿವೆ.
ಮೂಲ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಹಾಗೂ ನ್ಯಾಯಾಲಯದ ತಡೆಯಾಜ್ಞೆಯು ನೂತನ ಆದೇಶವನ್ನು ಜಾರಿಗೊಳಿಸುವ ಸರಕಾರದ ನಿರ್ಧಾರವನ್ನು ತಡೆಯುವುದಿಲ್ಲ ಎಂದು ಈ ವಾರ ಅಮೆರಿಕದ ಕಾನೂನು ಇಲಾಖೆ ಹೇಳಿದೆ.
ಅದೇ ವೇಳೆ, ನೂತನ ಆದೇಶದ ಪರಿಣಾಮವು ಹಿಂದಿನ ಆದೇಶದಂತೆಯೇ ಇದೆ ಹಾಗೂ ನ್ಯಾಯಾಲಯವೊಂದರ ಹಿಂದಿನ ತೀರ್ಪನ್ನು ಬದಲಾಯಿಸುವ ಬಗ್ಗೆ ಫೆಡರಲ್ ಸರಕಾರವು ಏಕಪಕ್ಷೀಯವಾಗಿ ನಿರ್ಧರಿಸುವಂತಿಲ್ಲ ಎಂದು ಇದಕ್ಕೆ ಪ್ರತಿಯಾಗಿ ವಾಶಿಂಗ್ಟನ್ ಮತ್ತು ಮಿನಸೋಟ ರಾಜ್ಯಗಳು ಹೇಳಿವೆ.







