ಪಂಜಾಬ್ ವಿಧಾನಸಭೆ ಚುನಾವಣೆ : ಕೇವಲ ಆರು ಮಹಿಳೆಯರ ಆಯ್ಕೆ

ಚಂಡೀಗಢ, ಮಾ.11: 117 ಸ್ಥಾನಗಳಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 81 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು ಇದರಲ್ಲಿ ಕೇವಲ 6 ಮಹಿಳೆಯರು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಮತ್ತು ‘ಆಪ್‘ ಪಕ್ಷದಿಂದ ತಲಾ ಮೂವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಠಿಂಡಾ ಗ್ರಾಮೀಣ ಕ್ಷೇತ್ರದಿಂದ ರೂಪಿಂದರ್ ಕೌರ್, ಜಗ್ರಾನ್ ಕ್ಷೇತ್ರದಿಂದ ಸರ್ವ್‌ಜಿತ್ ಕೌರ್, ತಲ್ವಾಂಡಿ ಸಾಬೊ ಕ್ಷೇತ್ರದಿಂದ ಪ್ರೊ. ಬಲ್ಜಿಂದರ್ ಕೌರ್ ಆಯ್ಕೆಯಾಗಿದ್ದು ಇವರೆಲ್ಲಾ ಆಪ್ ಪಕ್ಷದವರಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅರುಣಾ ಚೌಧರಿ(ದಿನಾನಗರ ಕ್ಷೇತ್ರ), ಸತ್ಕಾರ್ ಕೌರ್ (ಫಿರೋಝ್‌ಪುರ ಗ್ರಾಮೀಣ ಕ್ಷೇತ್ರ) ಮತ್ತು ರಝಿಯಾ ಸುಲ್ತಾನ್ (ಮಲೆರ್‌ಕೋಟ್ಲಾ ಕ್ಷೇತ್ರ) ಗೆಲುವು ಸಾಧಿಸಿದ್ದಾರೆ.
ಇವರಲ್ಲಿ ಅತ್ಯಧಿಕ ಅಂತರದ ಜಯದ ದಾಖಲೆ ಕಾಂಗ್ರೆಸ್‌ನ ಅರುಣಾ ಚೌಧರಿ ಅವರದ್ದಾಗಿದೆ. ಇವರು 31,917 ಮತಗಳ ಅಂತರದಿಂದ ಗೆದ್ದಿದ್ದಾರೆ. ‘ಆಪ್’ನ ರೂಪಿಂದರ್ ಕೌರ್ 10,778 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಕನಿಷ್ಠ ಅಂತರದ ಗೆಲುವಾಗಿದೆ.
2012ರ ಚುನಾವಣೆಯಲ್ಲಿ 93 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು ಇವರಲ್ಲಿ ಕೇವಲ 14 ಮಹಿಳೆಯರು ಗೆಲುವು ಸಾಧಿಸಿದ್ದರು.







