ನನ್ನ ಆತ್ಮಕತೆಯಲ್ಲಿ ಬದುಕಿನೊಂದಿಗೆ ಮಂಗಳೂರಿನ ನಂಟು: ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ
'ಕರೇಜ್ ಆ್ಯಂಡ್ ಕಮಿಟ್‌ಮೆಂಟ್' ಆತ್ಮಕತೆ ಬಿಡುಗಡೆ

ಮಂಗಳೂರು, ಮಾ. 11: ಆತ್ಮಕತೆಯೊಳಗೆ ಮಂಗಳೂರಿನ ವಿಶೇಷ ನಂಟನ್ನು ತೆರೆದಿಟ್ಟಿದ್ದೇನೆ. ನನ್ನ ಹುಟ್ಟು, ಶಾಲೆಯ ದಿನಗಳು ಸಹಿತ ಪ್ರೀತಿಯ ಬದುಕನ್ನು ತೆರೆದಿಟ್ಟಿದ್ದೇನೆ. ನನ್ನ ಆತ್ಮಕಥೆ ಕೇವಲ ರಾಜಕೀಯ ಚರಿತ್ರೆ ಅಲ್ಲ ಎಂದು ರಾಜಸ್ಥಾನ, ಉತ್ತರಖಂಡ ರಾಜ್ಯಗಳ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ.
ಅವರು ಶನಿವಾರ ದ ಕೆಥೋಲಿಕ್ ಅಸೋಸಿಯೇಶನ್ ಆ್ ಸೌತ್ ಕೆನರಾ ಹಾಗೂ ದ ಆ್ಯಗ್ನೇಶಿಯನ್ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಬೆಂದೂರ್‌ನ ಸಂತ ಆ್ಯಗ್ನೆಸ್ ಕಾಲೇಜಿನ ಅವಿಲಾ ಸಭಾಂಗಣದಲ್ಲಿ ಮಾರ್ಗರೇಟ್ ಆಳ್ವ ಅವರ 'ಕರೇಜ್ ಆ್ಯಂಡ್ ಕಮಿಟ್‌ಮೆಂಟ್' ಆತ್ಮಕತೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ಹಾಗೂ ಸಾರ್ವಜನಿಕ ಬದುಕಿನ ಸಾಧನೆ, ಹೋರಾಟ, ಸೋಲುಗಳ ವಿಮರ್ಶೆಯ ಹಾದಿಯನ್ನು ದಾಖಲಿಸುವ ಕೆಲಸ ಮಾಡಿದ್ದೇನೆ. ದೇಶದ 8 ನಗರಗಳಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇದು ನನ್ನ ಜೀವನದ ಕಥೆ. ಸುಮಾರು 850 ಪುಟಗಳು ಇರುವ ಈ ಆತ್ಮಕತೆಯನ್ನು ಮೂರು ವರ್ಷಗಳ ಕಾಲ ರಾಜಭನವದಲ್ಲಿ ಕೂತು ಬರೆದಿದ್ದೇನೆ ಎಂದು ಆಳ್ವ ಹೇಳಿದರು.
ಹೆತ್ತವರಿಗೆ ತಾನು ಮೂರನೇ ಮಗಳು. ಹೆಣ್ಣು ಮಕ್ಕಳ ಕುರಿತಾಗಿ ಅತಿಯಾದ ಕಟ್ಟುಪಾಡುಗಳಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ರಾಜಕೀಯ ರಂಗದಲ್ಲಿ ಧುಮುಕಿ ಸಾಧಿಸಿ ತೋರಿಸುವ ಇಚ್ಛೆಯನ್ನು ತಾಯಿ ಮುಂದೆ ವ್ಯಕ್ತಪಡಿಸಿದ್ದೆ. ಅದರಂತೆಯೇ ನಡೆದುಕೊಂಡ ತೃಪ್ತಿ ನನಗಿದೆ ಎಂದರು.
ದ ಕೆಥೋಲಿಕ್ ಅಸೋಸಿಯೇಶನ್ ಆ್ ಸೌತ್ ಕೆನರಾದ ಕಾರ್ಯದರ್ಶಿ ಮಾರಿಯೋ ಸಲ್ಡಾನ, ಕಾಲೇಜಿನ ಪ್ರಿನ್ಸಿಪಾಲೆ ಭಗಿನಿ ಡಾ. ಜೆಸ್ವಿನಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಉಷಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಆ್ಯಡ್ ಸಿಂಡಿಕೇಟ್ ಪ್ರೈವೆಟ್ ಸಂಸ್ಥೆಯ ಸಂಪಾದಕಿ ಭಾರತಿ ಶೇವಗೂರ್, ಕಾಲ್ ಫಾರ್ ಸೇಫ್ಟಿ ಆ್ಯಂಡ್ ಕ್ವಾಲಿಟಿ ಸೊಲ್ಯೂಶನ್ಸ್‌ನ ನಿರ್ದೇಶಕ ಕ್ಯಾ. ರಾಮ್‌ಪ್ರಸಾದ್, ಡಾ. ಎಂ. ವಿ. ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡಾ.ಊರ್ಮಿಳಾ ಶೆಟ್ಟಿ, ಮುಂಬೈಯ ವೈಡಬ್ಲ್ಯೂಸಿಎ ಮಾಜಿ ಅಧ್ಯಕ್ಷ ಗುಲಾಬಿ ಫೆರ್ನಾಂಡಿಸ್, ಸಾಹಿತಿ ಜಾನ್ ಬಿ. ಮೊಂತೆರೊ, ನಾರ್ಬರ್ಟ್ ಅವರು ಮಾರ್ಗರೇಟ್ ಆಳ್ವ ಅವರೊಂದಿಗೆ ಸಂವಾದ ನಡೆಸಿದರು.
ದ ಕೆಥೋಲಿಕ್ ಅಸೋಸಿಯೇಶನ್ ಆ್ ಸೌತ್ ಕೆನರಾದ ಅಧ್ಯಕ್ಷ ಆರ್.ಸಿ. ರೊಡ್ರಿಗಸ್ ಸ್ವಾಗತಿಸಿದರು. ಉಪಾಧ್ಯಕ್ಷ ನಯನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.







