ಗೃಹಬಳಕೆ ಅನಿಲ ಬೆಲೆ ಏರಿಕೆ: ವೆಲ್ಫೇರ್ ಪಾರ್ಟಿ ಧರಣಿ

ಭಟ್ಕಳ, ಮಾ.11: ಕೇಂದ್ರ ಸರಕಾರ ಗೃಹಬಳಕೆ ಅನಿಲ ಹಾಗೂ ಬ್ಯಾಂಕ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಹೆಚ್ಚಳ ಮಾಡಿ ಜನಸಾಮಾನ್ಯರ ಜೀವನ ದುಸ್ತರಗೊಳಿಸಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಶುಕ್ರವಾರ ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ, ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಈ ಸಂದಭರ್ ಮಾತನಾಡಿದ ವೆಲ್ಫೇರ್ ಪಾರ್ಟಿ ತಾಲೂಕು ಅಧ್ಯಕ್ಷ ಖಮರುದ್ದೀನ್ ಮಷಾಯಿಖ್, ‘ಅಚ್ಛೇದಿನ್ ಆಯೆಂಗೆ’ ಎಂದು ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರಕಾರ ದಿನೇ ದಿನೇ ಆವಶ್ಯಕ ವಸ್ತುಗಳ ಬೆಲೆಯನ್ನು ಏರಿಸುವುದರ ಮೂಲಕ ಜನ ಜೀವನ ದುಸ್ತರಗೊಳಿಸಿದೆ. ಪೆಟ್ರೋಲ್, ಡೀಸೆಲ್, ಗೃಹಬಳಕೆಯ ಅನಿಲ ದರಗಳ ಹೆಚ್ಚಳ ಅಲ್ಲದೆ ಏಕಾಏಕಿ ನೋಟು ನಿಷೇಧ ಮಾಡುವುದರ ಮೂಲಕ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ದೇಶವನ್ನು ಡಿಜಿಟಲ್ ಮಾಡುವುದಾಗಿ ಹೇಳಿದ ಸರಕಾರ ಈಗ ಏಕಾಏಕಿ ಪ್ರಮುಖ ಬ್ಯಾಂಕುಗಳು ಶುಲ್ಕವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಸಣ್ಣಪುಟ್ಟ ವ್ಯಾಪಾರಿಗಳಿಗೆ, ಬಡ ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗುತ್ತಿದೆ. ಅಚ್ಛೇ ದಿನಗಳ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದಭರ್ದಲ್ಲಿ ಮುಖಂಡರಾದ ಡಾ.ನಸೀಮ್ ಖಾನ್, ಸೈಯದ್ ಅಶ್ರಪ್ ಬರ್ಮಾವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸೈಯದ್ ಅಬುಲ್ ಅಲಾ ಬರ್ಮಾವರ್, ಫಾರೂಕ್ ಮಾಸ್ಟರ್, ಅಬ್ದುಲ್ ಜಬ್ಬಾರ್ ಅಸದಿ, ಅಬ್ದುಲ್ ಮಜೀದ್ ಕೋಲಾ ಹಾಗೂ ಮಹಿಳಾ ಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.







