ಪುತ್ತೂರು: ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಶಾಖೆ ಉದ್ಘಾಟನೆ

ಪುತ್ತೂರು, ಮಾ.11: ದೇಶದ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಕಾರ ಸಂಸ್ಥೆಗಳು ಜನಸಾಮಾನ್ಯರಲ್ಲಿ ಸಣ್ಣ ಉಳಿತಾಯದ ಪ್ರೇರಣೆ ನೀಡುವ ಕೆಲಸ ಮಾಡಿವೆ. ಸರಕಾರದ ಪಾಲುದಾರನಾಗಿ ಅಭಿವೃದ್ಧಿಯ ಸಂಕಲ್ಪ ತೊಟ್ಟಿರುವ ಸಹಕಾರ ಸಂಘಗಳು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ವ್ಯವಹಾರ ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳು ಸಮಾಜದ ಆರ್ಥಿಕ ವ್ಯವಸ್ಥೆಯ ಕಾವಲುಗಾರನಾಗಿ ಕೆಲಸ ಮಾಡಬೇಕಾಗಿದೆ ಎಂದು ಕೇಂದ್ರ ಸಾಂಖಿಕ್ಯೆ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘದ 4ನೆ ಶಾಖೆಯನ್ನು ಶನಿವಾರ ಪುತ್ತೂರಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಶಿಸ್ತು ಇದ್ದರೆ ಮಾತ್ರ ಸಹಕಾರ ಸಂಘಗಳು ಯಶಸ್ಸು ಕಾಣಲು ಸಾಧ್ಯ. ಆಡಳಿತ ಮತ್ತು ಗ್ರಾಹಕರ ನಡುವೆ ಸಮನ್ವಯ ಇದ್ದಾಗ ಸಹಕಾರ ಸಂಸ್ಥೆಗಳು ಆರ್ಥಿಕವಾಗಿ ಸಬಲಗೊಳ್ಳಲು ಸಾಧ್ಯ. ಯೋಜನಾ ಬದ್ಧ ಕಾರ್ಯನಿರ್ವಹಣೆಯಿಂದ ಸಮತೋಲನದ ಆಡಳಿತ ನಡೆಸಲು ಸಹಕಾರ ಸಂಸ್ಥೆಗಳಿಗೆ ಸಾಧ್ಯವಾಗುತ್ತದೆ ಎಂದರು.
ಕರ್ನಾಟಕದಲ್ಲಿ 4 ಸಾವಿರ ಸೌಹಾರ್ದ ಸಹಕಾರಿ ಸಂಘಗಳಿವೆ. ಈ ಪೈಕಿ 1 ಸಾವಿರ ಸಹಕಾರಿ ಸಂಘಗಳು ಇ-ಸ್ಟಾಂಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿವೆ. ಕೇವಲ ಠೇವಣಿ ಸಂಗ್ರಹ ಮತ್ತು ಸಾಲ ನೀಡಿಕೆಯಷ್ಟೇ ಇಂದು ಸಹಕಾರ ಸಂಘಗಳ ಉದ್ದೇಶವಾಗಿಲ್ಲ. ಬದಲಾಗಿ ಸಹಕಾರ ಸಂಘಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಸ್ಥೆಯು ಗ್ರಾಮ ವಿದ್ಯುದ್ದೀಕರಣದ ಮಹತ್ವಾಕಾಂಕ್ಷಿ ಯೋಜನೆಗೆ ಸಹಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕದ ಕನಸನ್ನು ನನಸುಗೊಳಿಸುವಂತೆ ಅವರು ಮನವಿ ಮಾಡಿದರು.
ಕ್ಯಾಂಪ್ಕೋ ಮತ್ತು ಶ್ರೀ ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ಕೇಂದ್ರ ಸರಕಾರದ ಅರ್ಥಿಕ ನೀತಿ ಮತ್ತು ವಾಣಿಜ್ಯ ನೀತಿಯ ಪರಿಣಾಮ ಮಂಗಳೂರು ಚಾಲಿ ಅಡಿಕೆ ಧಾರಣೆ ಶೀಘ್ರದಲ್ಲೇ ಕೆ.ಜಿ.ಯೊಂದರ 250 ರೂ.ಗಳ ಗಡಿ ದಾಟಲಿದೆ. ಅಡಿಕೆ ಮಾರುಕಟ್ಟೆ ಸಹಿತ ಎಲ್ಲಾ ಉದ್ಯಮ ರಂಗಗಳಲ್ಲೂ ಈ ದೇಶದ ಸಹಕಾರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಸೌಹಾರ್ದ ಸಹಕಾರಿ ಸಂಸ್ಥೆಗಳಿಗೆ ಅರ್.ಬಿ.ಐ. ಆಡಿಟ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದ ಸತೀಶ್ವಂದ್ರ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಸ್ಥೆಯು ಪುತ್ತೂರು ತಾಲೂಕಿನಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಅದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸವಣೂರು ಸೀತಾರಾಮ ರೈ, ಪುತ್ತೂರು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ., ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ್ ಪೈಲೂರು, ಪುತ್ತೂರು ಸೆಂಟರ್ ಕಟ್ಟಡದ ಮಾಲಿಕ ಶ್ರೀಶ ಬಳಕ್ಕಳ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಉರ್ಬಾನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಮಚಂದ್ರ ಹೊಳ್ಳ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯತ್ ಗುತ್ತಿಗೆದಾರರ ಸಂಘದ ಪುತ್ತೂರು ಉಪ ಸಮಿತಿ ಅಧ್ಯಕ್ಷ ಕೃಷ್ಣ ಗೌಡ ಸ್ವಾಗತಿಸಿದರು.
ಸೌಹಾರ್ದ ಸಹಕಾರಿಯ ಪುತ್ತೂರು ಶಾಖೆಯ ಅಧ್ಯಕ್ಷ ಮಹಾದೇವ ಶಾಸ್ತ್ರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಹಕಾರಿಯ ಪುತ್ತೂರು ಶಾಖ ವ್ಯವಸ್ಥಪಕ ಕೆ. ಮಹಾಬಲ ರೈ ವಂದಿಸಿದರು. ವೆಂಕಟರಮಣ ಘಾಟೆ ಕಾರ್ಯಕ್ರಮ ನಿರೂಪಿಸಿದರು.







