ಮಂಗಳೂರು: ಇಯರ್ ಬ್ಯಾಕ್ ಪದ್ದತಿ ವಿರುದ್ಧ ನಾಲ್ಕನೆ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ

ಮಂಗಳೂರು, ಮಾ. 11: ಕಾವೂರಿನ ಪಂಜಿಮೊಗರು ಪ್ರದೇಶದಲ್ಲಿರುವ ಎಂ.ವಿ. ಶೆಟ್ಟಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ಅನಧಿಕೃತ ಇಯರ್ ಬ್ಯಾಕ್ ಸಿಸ್ಟಂ ವಿರುದ್ಧ ಮತ್ತು ವಿದ್ಯಾರ್ಥಿನಿಯ ಆತ್ಮಹತ್ಯೆ ಯತ್ನಕ್ಕೆ ಕಾರಣವಾದ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕಾಲೇಜಿನ ಕ್ಯಾಂಪಸ್‌ನೊಳಗೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಇದಕ್ಕೆ ಸ್ಪಂದಿಸಿದ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರು ಕಾಲೇಜಿನ ಕಡತಗಳನ್ನು ಪರೀಕ್ಷಿಸಿರುವುದು ಮಾತ್ರವಲ್ಲದೇ ಕಾಲೇಜಿನ ಆಡಳಿತ ಮಂಡಳಿಯ ಜೊತೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಪೂರಕವಾದ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದರು.
ಕುಲಪತಿಯವರು ಆಡಳಿತ ಮಂಡಳಿಯ ಜೊತೆ ಮಂಗಳವಾರ ಸಭೆ ಕರೆದಿದ್ದು, ಸಭೆಯಲ್ಲಿ ವಿದ್ಯಾರ್ಥಿಗಳ ಪರವಾದ ತೀರ್ಮಾನ ಬರುವ ವರೆಗೆ ತರಗತಿ ಬಹಿಷ್ಕಾರ ನಡೆಸಿ ಪ್ರತಿಭಟಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಎಸ್‌ಎಫ್‌ಐನ ಪ್ರಕಟನೆ ತಿಳಿಸಿದೆ.
ಪ್ರತಿಭಟನೆಯ ನೇತೃತ್ವವನ್ನು ಎಸ್.ಎಫ್.ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಹಂಝ ಕಿನ್ಯಾ, ವಿದ್ಯಾರ್ಥಿಗಳಾದ ಸೋನು ಮೋಹನ್, ಶರತ್, ಅಸ್ಕರ್, ಮನೀಷ ಮುಂತಾದವರು ವಹಿಸಿದ್ದರು.







