ಮೊದಲ ಟೆಸ್ಟ್: ಎಲ್ಗರ್ ಅರ್ಧಶತಕ, ದಕ್ಷಿಣ ಆಫ್ರಿಕ ಹೋರಾಟ

ಡುನೇಡಿನ್(ನ್ಯೂಝಿಲೆಂಡ್), ಮಾ.11: ಮಳೆಬಾಧಿತ ಮೊದಲ ಟೆಸ್ಟ್‌ನ ನಾಲ್ಕನೆ ದಿನದಾಟದಲ್ಲಿ ದಕ್ಷಿಣ ಆಫ್ರಿಕ ತಂಡ ಹೋರಾಟ ನಡೆಸುತ್ತಿದ್ದು, ಆರಂಭಿಕ ದಾಂಡಿಗ ಡೀನ್ ಎಲ್ಗರ್ ವಿಕೆಟ್ ಉರುಳಿಸಿದ ನ್ಯೂಝಿಲೆಂಡ್ ತಂಡ ಪಂದ್ಯದಲ್ಲಿ ಪ್ರತಿ ಹೋರಾಟ ನೀಡಿದೆ.
ಮಂದಬೆಳಕಿನಿಂದಾಗಿ ಪಂದ್ಯ 20 ನಿಮಿಷ ಬೇಗನೆ ಕೊನೆಗೊಂಡಾಗ ದಕ್ಷಿಣ ಆಫ್ರಿಕ 6 ವಿಕೆಟ್‌ಗಳ ನಷ್ಟಕ್ಕೆ 224 ರನ್ ಗಳಿಸಿದ್ದು, 191 ರನ್ ಮುನ್ನಡೆಯಲ್ಲಿದೆ. 4ನೆ ದಿನದಾಟದಲ್ಲಿ ಎರಡು ಬಾರಿ ಮಳೆ ಅಡ್ಡಿಪಡಿಸಿದ್ದು, ಕೇವಲ 186 ರನ್ ಗಳಿಸಲು ಸಾಧ್ಯವಾಗಿದೆ. ಐದು ವಿಕೆಟ್‌ಗಳು ಪತನಗೊಂಡಿವೆ. ದಿನದಾಟದಂತ್ಯಕ್ಕೆ ಎಫ್‌ಡು ಪ್ಲೆಸಿಸ್(56) ಹಾಗೂ ವೆರ್ನಾನ್ ಫಿಲ್ಯಾಂಡರ್(1) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ 140 ರನ್ ಗಳಿಸಿದ್ದ ಎಲ್ಗರ್ ಎರಡನೆ ಇನಿಂಗ್ಸ್‌ನಲ್ಲೂ ದಕ್ಷಿಣ ಆಫ್ರಿಕ ತಂಡಕ್ಕೆ ಆಸರೆಯಾದರು. ಕ್ರಮವಾಗಿ 3ನೆ ಹಾಗೂ 4ನೆ ವಿಕೆಟ್‌ನಲ್ಲಿ ಡುಮಿನಿ(39) ಹಾಗೂ ಪ್ಲೆಸಿಸ್(56) ಅವರೊಂದಿಗೆ 74 ಹಾಗೂ 80 ರನ್ ಜೊತೆಯಾಟ ನಡೆಸಿದ ಎಲ್ಗರ್ ಮಳೆಯ ಕಾಟದ ನಡುವೆಯೂ ಆಫ್ರಿಕದ ಇನಿಂಗ್ಸ್ ಆಧರಿಸಿದರು. ದಕ್ಷಿಣ ಆಫ್ರಿಕದ ದ್ವಿತೀಯ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಸ್ಟೀಫನ್ ಕುಕ್ ವಿಕೆಟ್‌ನ್ನು ಪಡೆದಿದ್ದ ಟ್ರೆಂಟ್ ಬೌಲ್ಟ್ ಶನಿವಾರ ಬಲಗಾಲಿನ ನೋವಿನಿಂದ ಮೈದಾನವನ್ನು ತೊರೆಯುವ ಮೊದಲು 2 ಓವರ್ ಬೌಲಿಂಗ್ ಮಾಡಿದ್ದರು.
ವಾಗ್ನರ್ ಅವರು ಹಾಶಿಮ್ ಅಮ್ಲ(24) ಹಾಗೂ ಜೆಪಿ ಡುಮಿನಿ(39) ವಿಕೆಟ್ ಕಬಳಿಸಿದರು. ಸ್ಪಿನ್ನರ್ ಜೀತನ್ ಪಟೇಲ್ ಸರಣಿಯಲ್ಲಿ ಸತತ ನಾಲ್ಕನೆ ಬಾರಿ ಆಫ್ರಿಕದ ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್(4) ವಿಕೆಟ್ ಪಡೆದರು.
ಪಟೇಲ್(2-72) ಹಾಗೂ ವಾಗ್ನರ್(2-57) ತಲಾ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ ಪ್ರಥಮ ಇನಿಂಗ್ಸ್: 308 ರನ್‌ಗೆ ಆಲೌಟ್
ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 341 ರನ್‌ಗೆ ಆಲೌಟ್
ದಕ್ಷಿಣ ಆಫ್ರಿಕ ದ್ವಿತೀಯ ಇನಿಂಗ್ಸ್: 102 ಓವರ್‌ಗಳಲ್ಲಿ 224/6
(ಎಲ್ಗರ್ 89, ಪ್ಲೆಸಿಸ್ ಅಜೇಯ 56, ಡುಮಿನಿ 39, ವಾಗ್ನರ್ 2-57, ಪಟೇಲ್ 2-72)







