ರಾಷ್ಟ್ರಪತಿ ಚುನಾವಣೆ: ಬಿಜೆಪಿ ಆಯ್ಕೆಯ ಅಭ್ಯರ್ಥಿ ಗೆಲುವಿಗೆ ಈಗ ದಾರಿ ಸುಗಮ

ಹೊಸದಿಲ್ಲಿ, ಮಾ.12: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಜುಲೈಯಲ್ಲಿ ಮುಕ್ತಾಯವಾಗಲಿದ್ದು, ಇದೀಗ ಎಲ್ಲರ ಚಿತ್ತ ರಾಷ್ಟ್ರಪತಿ ಚುನಾವಣೆಯತ್ತ ಹರಿದಿದೆ. ಹೊಸ ರಾಷ್ಟ್ರಪತಿಗಳನ್ನು ಸಂಸತ್ತಿನ ಉಭಯ ಸದನಗಳು ಚುನಾಯಿತ ಪ್ರತಿನಿಧಿಗಳು ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಚುನಾಯಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಬಿಜೆಪಿ ಆಯ್ಕೆ ಮಾಡುವ ರಾಷ್ಟ್ರಪತಿ ಆಯ್ಕೆಗೆ ಹಾದಿ ಸುಗಮವಾಗಿದೆ.
ಪ್ರತಿ ಸಂಸದರ ಮತಕ್ಕೆ 708 ಮತಮೌಲ್ಯವಿದ್ದು, ಪ್ರತಿ ಶಾಸಕರ ಮತಮೌಲ್ಯ 1971ರ ಜನಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತದೆ. ಒಟ್ಟು ಮತಮೌಲ್ಯ 10.99 ಲಕ್ಷ ಆಗಿದೆ. ಈ ಪೈಕಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರ ಮತಮೌಲ್ಯ 4,120 ಆಗಿದ್ದರೆ, ಉಳಿದ ಮತಮೌಲ್ಯ 776 ಸಂಸದರದ್ದು. ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಕಾಶ್ಮೀರ ಸೇರಿದಂತೆ ಇತರ ರಾಜ್ಯಗಳಲ್ಲಿ ಗೆದ್ದ ಹೆಚ್ಚುವರಿ ಸ್ಥಾನಗಳು ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕ ಸಂಖ್ಯೆಯ ಬಿಜೆಪಿ ಶಾಸಕರು ಇರುವ ಹಿನ್ನೆಲೆಯಲ್ಲಿ ಬಿಜೆಪಿಯ ಒಟ್ಟು ಮತ ಪ್ರಮಾಣ ಶೇಕಡ 47.5ರಷ್ಟಾಗುತ್ತದೆ. ಉಳಿದ ಶೇಕಡ 2.5 ಮತಕ್ಕೆ ಎಐಎಡಿಎಂಕೆ (5.4) ಹಾಗೂ ಬಿಜೆಡಿ (3.4) ಮತಗಳನ್ನು ಅವಲಂಬಿಸಬಹುದಾಗಿದೆ. ಇಲ್ಲದಿದ್ದರೆ ವೈಎಸ್‌ಆರ್ ಕಾಂಗ್ರೆಸ್ (ಶೇ. 2) ಹಾಗೂ ಟಿಆರ್‌ಎಸ್ (ಶೇ.1.6) ಸೇರಿದರೂ ಬಿಜೆಪಿ ಹಾದಿ ಸುಗಮವಾಗುತ್ತದೆ.
ಇನ್ನೊಂದೆಡೆ ಶಿವಸೇನೆ ಬಿಜೆಪಿಯ ಅಧ್ಯಕ್ಷೀಯ ಓಟಕ್ಕೆ ತಡೆ ಒಡ್ಡುವ ಸಾಮರ್ಥ್ಯ ಹೊಂದಿದ್ದು, ಶಿವಸೇನೆ ಸುಮಾರು ಶೇಕಡ 2.4 ಮತಗಳನ್ನು ಹೊಂದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ವಿರೋಧಿಸುತ್ತಾ ಬಂದ ಇತಿಹಾಸದ ಹಿನ್ನೆಲೆ ಆ ಪಕ್ಷಕ್ಕಿದೆ. 2007ರಲ್ಲಿ ಪ್ರತಿಭಾ ಪಾಟೀಲ್ ಹಾಗೂ 2012ರಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಶಿವಸೇನೆ ಬೆಂಬಲಿಸಿತ್ತು. ಶಿವಸೇನೆಯು ತೃಣಮೂಲ ಕಾಂಗ್ರೆಸ್ ಹಾಗೂ ಇತರ ಪ್ರಾದೇಶಿಕ ಪಕ್ಷಗಳ ಜತೆಗೂ ಸಂಪರ್ಕ ಹೊಂದಿದೆ.
ಆದರೆ ರಾಷ್ಟ್ರಪತಿ ಚುನಾವಣೆಗೆ ಶೇಕಡ 7.6 ಮತಗಳನ್ನು ನೀಡುವ ಉತ್ತರ ಪ್ರದೇಶದ ಭರ್ಜರಿ ವಿಜಯ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ. ಬಿಜೆಪಿ ಹಾಗೂ ಮಿತ್ರಪಕ್ಷಗಳು ಶೇಕಡ 80ರಷ್ಟು ಸ್ಥಾನಗಳನ್ನು ಗೆದ್ದಿದ್ದು, ಶೇಕಡ 6ರಷ್ಟು ಮತಗಳು ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಖಚಿತವಾಗಿವೆ. ಇದರ ಜತೆಗೆ ಪಂಜಾಬ್, ಉತ್ತರಾಖಂಡ, ಗೋವಾ ಹಾಗೂ ಮಣಿಪುರದ ಮತಗಳು ಸೇರಿ ಗೆಲುವಿನ ದಡ ಸೇರುವುದು ಕಷ್ಟವಾಗದು.