ಸುಮ್ಮನೆ ಗೆಲ್ಲಲಿಲ್ಲ ಬಿಜೆಪಿ
ಈ ದಿಗ್ವಿಜಯಕ್ಕಾಗಿ ಎರಡು ವರ್ಷಗಳಲ್ಲಿ ಏನೇನು ತಯಾರಿ ಮಾಡಿತ್ತು ಗೊತ್ತೇ?
ಲಕ್ನೋ, ಮಾ.12: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದಿಗ್ವಿಜಯ ಎಲ್ಲರ ಹುಬ್ಬೇರಿಸಿರಬಹುದು. 1991ರಲ್ಲಿ ರಾಮಜನ್ಮ ಭೂಮಿ ಚಳವಳಿಯ ಅಲೆಯಲ್ಲಿ 221 ಸ್ಥಾನಗಳನ್ನು ಗೆದ್ದಿದ್ದ ದಾಖಲೆಯನ್ನು ಅಳಿಸಿ ಹಾಕಿ ಹೊಸ ದಾಖಲೆ ಸೃಷ್ಟಿಸಿರುವ ಬಿಜೆಪಿ, ಇದಕ್ಕಾಗಿ ಎರಡು ವರ್ಷಗಳಿಂದ ತಯಾರಿ ನಡೆಸಿತ್ತು ಎನ್ನುವುದು ಉಲ್ಲೇಖಾರ್ಹ.
ಕೇಸರಿ ಪಡೆ 67 ಸಾವಿರ ಕಾರ್ಯಕರ್ತರೊಂದಿಗೆ ಈ ಸಮರಾಭ್ಯಾಸ ನಡೆಸಿತ್ತು. 900 ರ್ಯಾಲಿಗಳನ್ನು ಆಯೋಜಿಸಿದ್ದು ಮಾತ್ರವಲ್ಲದೇ, ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಲುವಾಗಿ 10 ಸಾವಿರ ವಾಟ್ಸ್ಆ್ಯಪ್ ಗುಂಪುಗಳನ್ನು ರಚಿಸಲಾಗಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ದಿನದಿಂದಲೇ ಬಿಜೆಪಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿತ್ತು. ಮತಗಟ್ಟೆ ಹಂತದಿಂದಲೇ ಸಂಘಟನೆ ಬಲಗೊಳಿಸುತ್ತಾ ಬಂದಿತ್ತು. 26 ವರ್ಷಗಳ ಬಳಿಕ ಮತ್ತೆ ಬಹುಮತ ಸಾಧಿಸುವ ಮೂಲಕ ಅದರ ತಂತ್ರಗಾರಿಕೆ ಫಲ ನೀಡಿದಂತಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಉಸ್ತುವಾರಿ ಓಂ ಮಾಥುರ್ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷ ಕೇಶವ ಪ್ರಸಾದ್ ಮೌರ್ಯ, ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಈ ಸಮರ ಸಿದ್ಧತೆಯ ಹೊಣೆ ಹೊತ್ತಿದ್ದರು ಎಂದು ಪಕ್ಷದ ಮೂಲಗಳು ಹೇಳಿವೆ. ರಾಮಜನ್ಮಭೂಮಿ ಅಲೆಯಲ್ಲಿ 221 ಸ್ಥಾನಗಳನ್ನು ಗೆದ್ದ ಬಳಿಕ ಪಕ್ಷದ ಬಲ ಕುಸಿಯುತ್ತಾ ಬಂದಿದ್ದು, 1996ರಲ್ಲಿ 174, 2002ರಲ್ಲಿ 88, 2007ರಲ್ಲಿ 51 ಹಾಗೂ 2012ರಲ್ಲಿ 47 ಸ್ಥಾನಕ್ಕೆ ಕುಸಿದಿತ್ತು.
ಕಳೆದ ವರ್ಷದ ಎಪ್ರಿಲ್ 24ರಂದು ಧಮ್ಮಚೇತನ ಯಾತ್ರೆ ಮೂಲಕ ಅನಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿತ್ತು. ಆರು ತಿಂಗಳ ಈ ಯಾತ್ರೆಯಲ್ಲಿ 453 ಸಭೆಗಳನ್ನು ನಡೆಸಲಾಗಿತ್ತು. ಇದು ಬಿಎಸ್ಪಿಯ ಸಾಂಪ್ರದಾಯಿಕ ಮತಬುಟ್ಟಿ ಎನಿಸಿದ ದಲಿತ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಹೊಸ ಮತದಾರರ ನೋಂದಣಿಗೂ ಬಿಜೆಪಿ ಅಭಿಯಾನ ಕೈಗೊಂಡಿತ್ತು. ಇದಕ್ಕಾಗಿ 6,235 ಶಿಬಿರಗಳನ್ನು ಏರ್ಪಡಿಸಿ, 9.14 ಲಕ್ಷ ಮತದಾರರನ್ನು ನೋಂದಾಯಿಸಿತ್ತು. ಬಳಿಕ ನವೆಂಬರ್ 5ರಂದು ನಾಲ್ಕು ಕಡೆಗಳಿಂದ ಬೃಹತ್ ಪರಿವರ್ತನಾ ಯಾತ್ರೆ ಆರಂಭಿಸಿ, ಎಲ್ಲ ಕ್ಷೇತ್ರಗಳಲ್ಲಿ ಅದು ಹಾದುಹೋಗುವಂತೆ ಮಾಡಿತು. ರಾಜ್ಯಾದ್ಯಂತ ಈ ಯಾತ್ರೆ ಮೂಲಕ ಪಕ್ಷದ ಮುಖಂಡರು 50.65 ಲಕ್ಷ ಮತದಾರರನ್ನು ತಲುಪಿದ್ದರು.
ಅಂತೆಯೇ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿ 1,650 ಕಾಲೇಜು ಸಭೆಗಳನ್ನು ನಡೆಸಿದ್ದಲ್ಲದೇ, 2,058 ಕಾಲೇಜು ರಾಯಭಾರಿಗಳನ್ನು ನಿಯೋಜಿಸಿತ್ತು. ಅಂತೆಯೇ ಮಹಿಳೆಯರನ್ನು ಗುರಿಯಾಗಿಸಿ ಎಲ್ಲ ಜಿಲ್ಲೆಗಳಲ್ಲೂ 77 ಮಹಿಳಾ ಸಮ್ಮೇಳನ ಆಯೋಜಿಸಿತ್ತು. ಇತರ ಹಿಂದುಳಿದ ವರ್ಗದವರನ್ನು ಆಕರ್ಷಿಸಲು 200 ಪಿಚ್ಚಡಾ ವರ್ಗ್ ಸಮ್ಮೇಳನ್ ಆಯೋಜಿಸಿತ್ತು. ಅಂತೆಯೇ ಸಮಾಜ ಮಾಧ್ಯಮವನ್ನು ಕೂಡಾ ಸಮರ್ಥವಾಗಿ ಬಳಸಿಕೊಂಡಿದ್ದು, ಈ ಎಲ್ಲವೂ ಒಟ್ಟಾಗಿ ಬಿಜೆಪಿಗೆ ಅಭೂತಪೂರ್ವ ವಿಜಯ ದೊರಕಿಸಿಕೊಟ್ಟಿದೆ.