ಕುವೈಟ್‌ನಲ್ಲಿ ಭೂಕಂಪ ಸಾಧ್ಯತೆ

ಕುವೈಟ್,ಮಾ. 12: ದೇಶ ಭೂಕಂಪದ ಬೆದರಿಕೆಯಿಂದ ಮುಕ್ತವಾಗಿಲ್ಲ ಎಂದು ಸಂಶೋಧನಾ ಸಂಸ್ಥೆಯ ಮುಖ್ಯ ಮೇಲ್ವಿಚಾರಕ ಡಾ ಅಬ್ದುಲ್ಲ ಅಲ್ ಇನೀಸಿ ಎಚ್ಚರಿಕೆ ನೀಡಿದ್ದಾರೆ. ಭಾರೀ ನಷ್ಟಕ್ಕೆ ಕಾರಣವಾಗಬಹುದಾದ ದೊಡ್ಡ ಭೂಕಂಪನದ ಸಾಧ್ಯತೆಯನ್ನು ಅವರು ಬಹಿರಂಗಪಡಿಸಿದ್ದಾರೆ. ಬೃಹತ್ ಕಟ್ಟಡಗಳು ನಾಶವಾಗಬಹುದು ಆದ್ದರಿಂದ ಅಪಾರ ನಷ್ಟ ಸಂಭವಿಸಲಿದೆ ಎಂದು ಅವರು ಹೇಳುತ್ತಾರೆ.
ಭೂಕಂಪವನ್ನು ಎದುರಿಸಲು ಸಾಧ್ಯವಿರುವ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರವೇ ಕಟ್ಟಡ ನಿರ್ಮಾಣಕ್ಕೆ ಕುವೈಟ್ ಪುರಸಭೆ ನಿಯಮಗಳನ್ನು ರೂಪಿಸಿದೆ. ಅದರ ಪ್ರಕಾರವೇ ಅಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಭಾರೀ ಪ್ರಮಾಣದ ತೈಲ ತೆಗೆಯುವುದರಿಂದಾಗಿ, ಪ್ರಕೃತಿಯಲ್ಲಿ ಉಂಟುಮಾಡುವ ಬದಲಾವಣೆಗಳನ್ನು ಪರಿಗಣಿಸುವಾಗ ಕುವೈಟ್‌ಗೆ ವಿಶೇಷ ನಿಯಮಾವಳಿಗಳ ಅಗತ್ಯವಿದೆ. ಗೃಹಕಲ್ಯಾಣ ಪ್ರಾಧಿಕಾರ, ಪುರಸಭೆ ಕುವೈಟ್ ವಿಶ್ವವಿದ್ಯಾನಿಲಯ ವಿಜ್ಞಾನ ಸಂಶೋಧನಾ ಸಂಸ್ಥೆ ಜಂಟಿಯಾಗಿ ಸಮಾಲೋಚಿಸಿ ಈ ವಿಷಯದಲ್ಲಿ ಸುಧಾರಣೆ ತರಬೇಕಾಗಿದೆ. ಗಗನಚುಂಬಿ ಕಟ್ಟಡಗಳು ಹತ್ತಿರ ಹತ್ತಿರ ಕಟ್ಟುವುದು ಭೂಕಂಪ ಸಾಧ್ಯತೆಗೆ ಹೆಚ್ಚು ಆಸ್ಪದವಾಗುವುದು. ದೊಡ್ಡ ಗಾತ್ರದ ಕಟ್ಟಡ ಕಟ್ಟುವಾಗ ಭೂಕಂಪಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು. ರಿಕ್ಟರ್ ಮಾಪನದಲ್ಲಿ ಸಣ್ಣಕಂಪನಗಳು ದಾಖಲಾಗಿಲ್ಲ ಎಂದು ಅವರು ಹೇಳಿದರು. ಆದರೆ ಹೀಗೆ ನಿರಂತರ ನಡೆಯುವ ಸಣ್ಣ ಭೂಕಂಪನಗಳು ದೊಡ್ಡ ಭೂ ಕಂಪನಕ್ಕೆ ಕಾರಣವಾಗುತ್ತದೆ ಎಂದು ಡಾ.ಅಬ್ದುಲ್ಲ ಅಲ್ ಇನೀಸಿ ಹೇಳಿದ್ದಾರೆಂದು ವರದಿಯಾಗಿದೆ.





