ನ್ಯಾಯಾಂಗ ಕ್ಷೇತ್ರದಲ್ಲಿ ವಿಫುಲ ಅವಕಾಶ: ನ್ಯಾಯಾಧೀಶ ಅಬ್ದುಲ್ ನಝೀರ್
*ಎಸ್‌ಡಿಎಂ ಕಾಲೇಜಿನ ‘ಕಾನೂನು ಹಬ್ಬ’ ಸಮಾರೋಪ

ಮಂಗಳೂರು, ಮಾ.12: ಕಾನೂನು ಕಲಿತರೆ ಉದ್ಯೋಗ ಸಿಗುವುದಿಲ್ಲ ಎಂಬ ಭಾವನೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿರುತ್ತದೆ. ಆದರೆ ಇದು ನಿಜವಲ್ಲ. ನ್ಯಾಯಾಂಗ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ಹೇಳಿದರು.
ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ರವಿವಾರ ನಡೆದ ‘ರಾಷ್ಟ್ರಮಟ್ಟದ ಕಾನೂನು ಹಬ್ಬ’ದ ಸಮಾರೋಪ ಸಮಾರಂಭ ಹಾಗೂ ಹಳೆ ವಿದ್ಯಾರ್ಥಿಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
1980ರ ದಶಕದಲ್ಲಿ ಕಾನೂನು ಕಲಿತ ಮೇಲೆ ಏನು ಮಾಡುವುದು ಎಂಬ ಪ್ರಶ್ನೆ ನನಗೆ ತಲೆದೋರಿತ್ತು. ಆದರೆ ಎದೆಗುಂದದೆ ನಿರಂತರ ಪರಿಶ್ರಮದಿಂದ ನ್ಯಾಯಾಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ತೃಪ್ತಿ ಇದೆ ಎಂದು ನ್ಯಾ. ಅಬ್ದುಲ್ ನಝೀರ್ ನುಡಿದರು.
ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿ ವಕೀಲರುಗಳನ್ನು ಕ್ರಿಮಿನಲ್ ವಕೀಲರು, ತೆರಿಗೆ ವಕೀಲರು ಎನ್ನುತ್ತಾರೆ. ಆದರೆ ಸಿವಿಲ್ ವ್ಯಾಜ್ಯ ನಿರ್ವಹಿಸುವವರನ್ನು ಕೇವಲ ವಕೀಲರು ಎಂದು ಗುರುತಿಸುತ್ತಾರೆ. ವಕೀಲ ವೃತ್ತಿಯ ಸಂದಭ ಇಂಗ್ಲಿಷ್ ಭಾಷೆಯಲ್ಲಿ ವಾದಿಸುವುದು ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಕಠಿಣ ಪರಿಶ್ರಮದಿಂದ ಭಾಷೆಯ ಮೇಲೆ ಹಿಡಿತ ಸಾಧ್ಯ. ಈ ನಿಟ್ಟಿನಲ್ಲಿ ವಕೀಲರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ನ್ಯಾ.ಅಬ್ದುಲ್ ನಝೀರ್ ಹೇಳಿದರು.
ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಎ.ಎಸ್.ಬೋಪಣ್ಣ ಮಾತನಾಡಿ, ವಕೀಲರು ವೃತ್ತಿಪರತೆಯೊಂದಿಗೆ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕು. ಇದರಿಂದ ಉತ್ತಮ ವಕೀಲರಾಗಿ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಲು ಸಾಧ್ಯ ಎಂದರು.
ಹೈಕೋರ್ಟ್ ನ್ಯಾಯಾಧೀಶರಾದ ಎ.ಎನ್.ವೇಣುಗೋಪಾಲ ಗೌಡ, ನ್ಯಾ.ಜಾನ್ ಮೈಕಲ್ ಡಿಕುನ್ಹ, ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಭಾರತದ ನ್ಯಾಯಾಂಗ ವ್ಯವಸ್ಥೆಗೆ ಅದರದ್ದೇ ಆದ ಗೌರವವಿದೆ. ದೇಶದಲ್ಲಿ ಪ್ರಾಚೀನ ಕಾಲದಿಂದಲೂ ನ್ಯಾಯ ಪದ್ಧತಿ ಇತ್ತು. ಧರ್ಮಸ್ಥಳದಲ್ಲೂ ಹುಯಿಲು ಮೂಲಕ ನ್ಯಾಯದಾನ ಮಾಡುವ ಕ್ರಮ ಈಗಲೂ ಚಾಲ್ತಿಯಲ್ಲಿದೆ. ಇತ್ತೀಚೆಗೆ 94 ವರ್ಷದಿಂದ ಬಗೆಹರಿಯದಿದ್ದ ವಿವಾದವೊಂದನ್ನು ಹುಯಿಲು ಮೂಲಕ ಬಗೆಹರಿಸಲಾಗಿದೆ ಎಂದರು.
ಕಾನೂನಿಗೆ ಸಂಬಂಧಿಸಿ ಅಧ್ಯಯನಗಳನ್ನು ನಡೆಸುವಾಗ ಈ ದೇಶದ ಪ್ರಾಚೀನ ಕಾನೂನಿನ ಬಗ್ಗೆ ಪರಿಜ್ಞಾನವನ್ನು ಹೊಂದಿದ್ದರೆ ಉತ್ತಮವಾಗುತ್ತದೆ. ಯುವಕರು ಕಾನೂನು ಶಿಕ್ಷಣ ಹಾಗೂ ವೃತ್ತಿಯ ಬಗ್ಗೆ ನಂಬಿಕೆಯನ್ನು ಇರಿಸಿಕೊಳ್ಳಬೇಕು ಎಂದು ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಕಾನೂನು ಮತ್ತು ನ್ಯಾಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನ್ಯಾಯಾಧೀಶರು ಬದಲಾಗಬಹುದು ಆದರೆ ನ್ಯಾಯ ಬದಲಾಗದು. ನ್ಯಾಯದಾನ ವ್ಯವಸ್ಥೆಯು ನ್ಯಾಯಮೂರ್ತಿಗಳ ಪ್ರಾಮಾಣಿಕತೆಯ ಮೇಲೆ ನಿಂತಿದೆ. ನ್ಯಾಯಾಲಯದಲ್ಲಿ ತೀರ್ಮಾನ ಮಾಡಲು ಸಾಧ್ಯವಾಗದ ಕೆಲವೊಂದು ವಿಚಾರಗಳು ಧಾರ್ಮಿಕ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುತ್ತವೆ. ಇದು ನಮ್ಮಲ್ಲಿರುವ ವಿಶೇಷತೆಯಾಗಿದೆ ಎಂದು ಡಾ.ವೀರೇಂದ್ರ ಹೆಗ್ಗಡೆ ನುಡಿದರು.
ಈ ಸಂದರ್ಭ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸುಪ್ರೀಂ ಕೋರ್ಟ್‌ನ ನೂತನ ನ್ಯಾಯಾಧೀಶ ಅಬ್ದುಲ್ ನಝೀರ್ ಮತ್ತು ಹೈಕೋರ್ಟ್ ನ್ಯಾಯಾಧೀಶ ಮೈಕಲ್ ಡಿಕುನ್ನಾರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಸಾಯಿನಾಥ್ ಮಲ್ಲಿಗೆಮಾಡು ಮತ್ತು ಡಾ.ಬಾಲಿಕಾ ಸನ್ಮಾನಿತರ ಪರಿಚಯ ಮಾಡಿದರು.
ನಿವೃತ್ತ ಪ್ರಾಂಶುಪಾಲರಾದ ಎನ್.ಟಿ.ಕಡಂಬ, ಪ್ರೊ.ರಾಜೇಂದ್ರ ಶೆಟ್ಟಿ, ಸಂಯೋಜಕ ಸಂತೋಷ್ ಪ್ರಭು, ಕಾರ್ಯದರ್ಶಿ ಗೌತಮಿ ಭಂಡಾರಿ, ಸಹ ಸಂಯೋಜಕರಾದ ವಿಕ್ರಮ್ ರಾಜ್, ವರ್ಷಾ ಶೆಟ್ಟಿ , ಅತುಲ್ಯಾ, ಸ್ಟೀಫಾನಿಯಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಸ್ವಾಗತಿಸಿದರು. ಸಿ, ಮಹೇಶ್ಚಂದ್ರ ನಾಯಕ್ ವಂದಿಸಿದರು. ವಿದ್ಯಾರ್ಥಿ ರೂಪೇಶ್ ಕಾರ್ಯಕ್ರಮ ನಿರೂಪಿಸಿದರು.







