ಜೀವನಾಂಶ : ಸುಪ್ರೀಂ ಆದೇಶ ಪಾಲಿಸದ ವ್ಯಕ್ತಿ ಜೈಲುಪಾಲು
ಹೊಸದಿಲ್ಲಿ,ಮಾ.12: ತನ್ನ ಪರಿತ್ಯಕ್ತ ಪತ್ನಿಗೆ ಒಂದು ಲಕ್ಷ ರೂ.ಮಧ್ಯಂತರ ಜೀವನಾಂಶ ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ ವ್ಯಕ್ತಿಯೋರ್ವನ ಪಾಲಿಗೆ ತುಂಬ ದುಬಾರಿಯಾಗಿ ಪರಿಣಮಿಸಿದೆ. ದಿಲ್ಲಿ ಉಚ್ಚ ನ್ಯಾಯಾಲಯವು ಆತನಿಗೆ ಎರಡು ತಿಂಗಳ ಜೈಲುಶಿಕ್ಷೆ ಮತ್ತು 2,000 ರೂ.ಗಳ ದಂಡವನ್ನು ವಿಧಿಸಿದೆ.
ಆರೋಪಿಯ ಮೊಂಡುತನದ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಉಚ್ಚ ನ್ಯಾಯಾಲಯವು, ಆತ ನ್ಯಾಯಾಂಗ ನಿಂದನೆಯನ್ನು ಎಸಗಿದ್ದಾನೆ ಎಂದು ಎತ್ತಿ ಹಿಡಿಯಿತು. ಕಾನೂನಿನ ಗೌರವ, ನ್ಯಾಯಾಲಯಗಳ ಘನತೆ ಮತ್ತು ನ್ಯಾಯಾಂಗ ಕಲಾಪಗಳ ಪಾವಿತ್ರವನ್ನು ಎತ್ತಿ ಹಿಡಿಯಲು ಆತನನ್ನು ಅಪರಾಧಿಯಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅದು ಹೇಳಿತು.
ನ್ಯಾಯಾಲಯದ ಮುಂದೆ ಸಲ್ಲಿಸಲಾಗಿರುವ ಛಾಯಾಚಿತ್ರಗಳು ಆರೋಪಿಯು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾನೆ ಎನ್ನುವುದನ್ನು ಬೆಟ್ಟುಮಾಡುತ್ತಿವೆ ಎಂದು ಹೇಳಿದ ನ್ಯಾ.ಮನಮೋಹನ್ ಅವರು, ಮಾಸಿಕ ಜೀವನಾಂಶ ನೀಡಲು ತನಗೆ ಸಾಧ್ಯವಿಲ್ಲ ಎಂಬ ಆತನ ಮನವಿಯನ್ನು ತಿರಸ್ಕರಿಸಿದರು. ಆರೋಪಿಯು ಉದ್ದೇಶಪೂರ್ವಕವಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ತನ್ನ ಪರಿತ್ಯಕ್ತ ಪತ್ನಿಗೆ ಮಧ್ಯಂತರ ಜೀವನಾಂಶವಾಗಿ 2016,ಮೇ 1ರಿಂದ ಮಾಸಿಕ ಒಂದು ಲಕ್ಷ ರೂ.ನೀಡುವಂತೆ ಮತ್ತು ಬಾಕಿಯಿರುವ ಜೀವನಾಂಶವನ್ನು ಮೂರು ತಿಂಗಳುಗಳಲ್ಲಿ ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆತನಿಗೆ 2016, ಎ.19ರಂದು ಆದೇಶಿಸಿತ್ತು.
ಆರೋಪಿಯ ಪರಿತ್ಯಕ್ತ ಪತ್ನಿ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪತಿಯಿಂದ ತನಗೆ 67 ಲ.ರೂ. ಬರುವುದು ಬಾಕಿಯಿದೆ ಎಂದು ದೂರಿಕೊಂಡಿದ್ದಳು.
ತನಗೆ ಮಾಸಿಕ 20,000 ರೂ.ಗಳ ವೇತನ ದೊರೆಯುತ್ತಿದ್ದು, ಸರ್ವೋಚ್ಚ ನ್ಯಾಯಾ ಲಯದ ಆದೇಶವನ್ನು ಪಾಲಿಸಲು ತಾನು ಆರ್ಥಿಕವಾಗಿ ಅಸಮರ್ಥನಾಗಿದ್ದೇನೆ ಮತ್ತು ತಾನು ಈವರೆಗೆ ತನ್ನ ಪರಿತ್ಯಕ್ತ ಪತ್ನಿಗೆ 43 ಲ.ರೂ.ಗಳನ್ನು ಪಾವತಿಸಿದ್ದೇನೆ ಎಂದು ಆರೋಪಿಯು ನಿವೇದಿಸಿಕೊಂಡಿದ್ದನ್ನು ನ್ಯಾ.ಮನಮೋಹನ್ ತಳ್ಳಿಹಾಕಿದರು.