ಯೋಗೇಶ್ ಮಾಸ್ಟರ್ ಮೇಲೆ ಮಸಿ ಎರಚಿದ ಕಿಡಿಗೇಡಿಗಳು: ಬಿಜೆಪಿ, ಆರೆಸ್ಸೆಸ್, ಹಿಂದೂಪರ ಸಂಘಟನೆಗಳೇ ನೇರಹೊಣೆ: ಗೌರಿ ಲಂಕೇಶ್

ದಾವಣಗೆರೆ, ಮಾ.12: ಸಾಹಿತಿ ಯೋಗೇಶ್ ಮಾಸ್ಟರ್ ಮೇಲೆ ಸುಮಾರು 8ರಿಂದ 10 ಜನರಿದ್ದ ದುಷ್ಕರ್ಮಿಗಳ ತಂಡವೊಂದು ಮಸಿ ಎರಚಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾದ ಘಟನೆ ರವಿವಾರ ಸಂಜೆ ನಗರದ ಯುಬಿಡಿಟಿ ಇಂಜಿನಿಯರ್ ಕಾಲೇಜ್ ಬಳಿ ನಡೆದಿದೆ.
ರವಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸಂದರ್ಭ ಟೀ ಕುಡಿಯಲು ಹತ್ತಿರದ ಬಸವ ಹೊಟೇಲ್‌ಗೆ ತನ್ನ ಸಂಗಡಿಗರೊಂದಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸುಮಾರು ನಾಲ್ಕೈದು ಬೈಕ್‌ನಲ್ಲಿ ಬಂದಿದ್ದ ಹತ್ತು ಜನರ ತಂಡ ಯೋಗೀಶ್ ಅವರ ಮೇಲೆ ದಿಢೀರ್ ದಾಳಿ ನಡೆಸಿ, ಬಾಟಲ್‌ಗಳಲ್ಲಿ ತಂದಿದ್ದ ಮಸಿಯನ್ನು ಎರಚಿ, ಅವರ ಕೂದಲನ್ನು ಕಿತ್ತಿದ್ದಲ್ಲದೇ, ಕಣ್ಣಿಗೂ ಹಾನಿ ಮಾಡುವ ಯತ್ನ ನಡೆಸಿದ್ದಾರೆ. ಅಲ್ಲದೆ, ಹಿಂದೂ ದೇವರನ್ನು ಖಂಡಿಸಿ ಬರೆದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಕೊಲ್ಲುತ್ತೇವೆ ಎಂದಿದ್ದಲ್ಲದೇ ಜೈ ಶ್ರೀರಾಮ್ ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ.
ಈ ಸಂದರ್ಭ ಯೋಗೇಶ್ ಜೊತೆಗಿದ್ದ ಚನ್ನಗಿರಿ ತಾಲೂಕು ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಓ.ಎಸ್. ನಾಗರಾಜ್, ಹರಪನಹಳ್ಳಿ ಉಪನ್ಯಾಸಕ ದುರ್ಗೇಶ್, ಗೋವರ್ದನ್ ಅವರಿಗೂ ಸಹ ದುರ್ಷರ್ಮಿಗಳು ಮಸಿ ಎರಚಿದ್ದಾರೆ.
ಬಿಜೆಪಿ, ಆರೆಸ್ಸೆಸ್, ಹಿಂದೂಪರ ಸಂಘಟನೆಗಳೇ ನೇರಹೊಣೆ: ಪತ್ರಕರ್ತೆ ಗೌರಿ ಲಂಕೇಶ್
ಸಾಹಿತಿ ಯೋಗೇಶ್ ಮಾಸ್ಟರ್ ಮೇಲೆ ಮಸಿ ದಾಳಿಗೆ ಆರೆಸ್ಸೆಸ್,. ಬಿಜೆಪಿ, ವಿಶ್ವಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳೇ ನೇರಹೊಣೆ ಎಂದು ಪತ್ರಕರ್ತೆ ಗೌರಿ ಲಂಕೇಶ್ ದೂರಿದರು.
ಮಸಿ ದಾಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರ ವಿವಿಧ ಹೋರಾಟಗಳಿಗೆ, ಚಿಂತನೆಗಳಿಗೆ ಒಳಪಡಿಸುವ ನಗರವಾಗಿದ್ದು, ಇಂತಹ ಸ್ಥಳದಲ್ಲಿ ಸಾಹಿತಿಯೊಬ್ಬರ ಮೇಲೆ ಯುವಕರು ದಾಳಿ ನಡೆಸುವ ನೀಚತನಕ್ಕೆ ತಲುಪಿರುವುದಕ್ಕೆ ಹಿಂದೂಪರ ಸಂಘಟನೆಗಳೇ ಪ್ರಮುಖ ಕಾರಣವಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ ಎಂದರು.
ಇದು ಕೇವಲ ಯೋಗೇಶ್ ಮಾಸ್ಟರ್‌ಗೆ ಆಗಿರುವ ಅವಮಾನವಲ್ಲ. ಪ್ರಗತಿಪರರು, ದಲಿತರು, ಎಡಪಂಥಿಯರೆಲ್ಲರಿಗೂ ಆಗಿರುವ ಅವಮಾನವಾಗಿದ್ದು, ಈ ಕೂಡಲೇ ದಾಳಿ ನಡೆಸಿದ ದಾಳಿಕೋರರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ನಂತರ ಸಾಹಿತಿ ಯೋಗೇಶ್ ಮಾಸ್ಟರ್ ಮಾತನಾಡಿ, ಇಲ್ಲಿನ ವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದರೆ ಒಬ್ಬ ಸಾಹಿತಿ ಸ್ವತಂತ್ರವಾಗಿ ಟೀ ಕುಡಿಯಲು ಆಗದಂತ ಸ್ಥಿತಿ ನಿರ್ಮಾಣವಾಗಿರುವುದು ದುರಂತ. ನನಗೆ ದೈಹಿಕವಾಗಿ, ಮಾನಸಿಕವಾಗಿ ದಾಳಿ ನಡೆಸಿ, ಕೀಳುಮಟ್ಟದ ಪದಬಳಕೆ ಮಾಡಿದ್ದಲ್ಲದೇ, ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಬರೆದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಕೂಗಿದ್ದು ನನಗೆ ಅಘಾತ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅವರು ಎರಚಿದ ಮಸಿಯಿಂದ ಕಣ್ಣುಗಳು ಇನ್ನೂ ಚೇತರಿಸಿಕೊಂಡಿಲ್ಲ. ಮಾತನಾಡಲು ಶಕ್ತಿ ಇಲ್ಲದಂತಾಗಿದೆ. ಹತ್ತಾರೂ ಜನರಿದ್ದ ತಂಡ ನೇರ ದಾಳಿ ನಡೆಸಿ, ಮಸಿ ಎರಚಿದ್ದು ಖಂಡನೀಯ. ದಾಳಿ ಮಾಡಿದ ಎಲ್ಲರನ್ನು ಗುರುತಿಸಬಲ್ಲೇ, ನನ್ನ ಬಳಿ ಪುಸ್ತಕ ನೋಡಲು ಬಂದಿದ್ದರು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.
ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ, ಯಾವುದೇ ವಿಚಾರವನ್ನು ಹೇಳಿಕೆಗಳ ಮೂಲಕ ಖಂಡಿಸಬೇಕೆ ವಿನಾ ಹಲ್ಲೆ ಮಾಡುವುದು ಸರಿಯಲ್ಲ. ಇದು ಕೀಳುಮಟ್ಟದ ಪ್ಯಾಸಿಸಂ ಸಂಸ್ಕೃತಿಯಾಗಿದೆ. ರಾಜ್ಯ ಸರ್ಕಾರ ಇಂತಹ ಕಿಡಿಗೇಡಿಗಳನ್ನು ಬಂಧಿಸಸಬೇಕು. ಹಾಗೂ ಇಂತಹ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿರುವ ಬಿಜೆಪಿಗೆ ಇದೊಂದು ದಿನ ಮುಳುವಾಗುವುದು ನಿಶ್ಚಿತ ಎಂದು ಹೇಳಿದರು.
ಘಟನೆ ಖಂಡಿಸಿ ಪ್ರತಿಭಟನೆ:
ಸಾಹಿತಿ ಯೋಗೀಶ್ ಮೇಲಿನ ಮಸಿ ದಾಳಿ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಿಂದ ಮೆರವಣಿಗೆ ಆರಂಭಿಸಿ ಘೋಷಣೆಗಳನ್ನು ಕೂಗುತ್ತಾ, ಆರೋಪಿಗಳನ್ನು ಈ ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಲಂಕೇಶ್ ಬಳಗ, ಕೋಮು ಸೌರ್ಹಾದ ವೇದಿಕೆ, ಸಿಪಿಐ, ಸಿಪಿಎಂ, ಎಸ್‌ಯುಸಿಐ, ಎಎಪಿ ಪಕ್ಷಗಳು ಸೇರಿದಂತೆ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು.
ಲಂಕೇಶ್-82 ಕಾರ್ಯಕ್ರಮ ನಡೆಯುತ್ತಿದ್ದ ನಗರದ ಕುವೆಂಪು ಕನ್ನಡ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು, ಸಂಘಪರಿವಾರದ ದೌರ್ಜನ್ಯದ ವಿರುದ್ಧ ಘೋಷಣೆ ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಾ, ಬಡಾವಣೆ ಠಾಣೆಗೆ ತೆರಳಿ ಎಬಿವಿಪಿ, ಆರ್‌ಎಸ್‌ಎಸ್, ವಿಎಚ್‌ಪಿ, ಬಿಜೆಪಿ ಸೇರಿದಂತೆ ಸಂಘಪರಿವಾರದ ಅಂಗ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿ, ಯೋಗೀಶ್ ಮಾಸ್ಟರ್ ಮೇಲೆ ಮಸಿ ಎರಚಿ, ಹಲ್ಲೆಗೆ ಯತ್ನಿಸಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು.
ಪ್ರಗತಿಪರರ ಮೇಲಿನ ದಾಳಿ:
ಲಂಕೇಶ್ ಅವರು ಪ್ರಗತಿಪರ ಚಿಂತನೆಯ ಮೂಲಕ ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರ ಕನಸು ನನಸು ಮಾಡಲು ಶ್ರಮಿಸುತ್ತಿರುವವರೆಲ್ಲರೂ ಸೇರಿ, ಎಡ ಪಂಥೀಯ ಚಳವಳಿಯ ಹಿನ್ನೆಲೆ ಹೊಂದಿರುವ ದಾವಣಗೆರೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವು. ಆದರೆ, ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಯ ಮೇಲೆ ದಾಳಿ ನಡೆಸಿರುವುದು ನೀಚತನದ ಕೃತ್ಯ. ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ, ಪ್ರಕರಣ ದಾಖಲಿಸಿದರು.
ಈ ಸಂದರ್ಭ ಕೋಸೌವೇ ಕೆ.ಎಲ್. ಆಶೋಕ, ಅನೀಸ್ ಪಾಷ್, ಶಿವಕುಮಾರ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ, ರಾಘವೇಂದ್ರ ಕುಷ್ಟಗಿ , ನರಸಿಂಹಮೂರ್ತಿ, ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಅನೀಸ್‌ಪಾಷ್, ಬಿ.ಎಂ. ಹನುಮಂತಪ್ಪ, ಸುಭಾಷಚಂದ್ರ, ಟಿ.ಎನ್.ಷಣ್ಮುಖಪ್ಪ, ಬಿ.ಎಸ್. ಗುರುಮೂರ್ತಿ, ಚಂದ್ರಶೇಖರ ತೋರಣಘಟ್ಟ, ಅವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಗಿರೀಶ್ ತಾಳಿಕಟ್ಟೆ, ಚಂದ್ರು ತಾಳಿಕಟ್ಟೆ, ಮೌಲಾನಾಯ್ಕ ಮತ್ತಿತರರಿದ್ದರು.







