25000 ವರ್ಷಗಳ ಹಿಂದೆ ಉಷ್ಟ್ರಪಕ್ಷಿ ಭಾರತದಲ್ಲಿತ್ತು

ಹೈದರಾಬಾದ್, ಮಾ.12: ಆಫ್ರಿಕ ಮೂಲದ ಹಾರಾಡದ ಪಕ್ಷಿಯಾಗಿರುವ ಉಷ್ಟ್ರಪಕ್ಷಿ ಭಾರತದಲ್ಲಿ ಸುಮಾರು 25 ಸಾವಿರ ವರ್ಷಗಳ ಹಿಂದೆ ವಾಸಿಸುತ್ತಿತ್ತು ಎಂದು ‘ಸೆಂಟರ್ ಫಾರ್ ಸೆಲ್ಯೂಲರ್ ಆ್ಯಂಡ್ ಮೊಲೆಕ್ಯುಲರ್ ಬಯಾಲಜಿ (ಸಿಸಿಎಂಬಿ) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಈ ಪಕ್ಷಿಯ ಮೂಲಸ್ಥಾನ ಆಫ್ರಿಕವಾಗಿದ್ದರೂ ಭಾರತದಲ್ಲಿ, ಅದರಲ್ಲೂ ಹೆಚ್ಚಾಗಿ ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಉಷ್ಟ್ರಪಕ್ಷಿಯ ಮೊಟ್ಟೆಯ ಚೂರುಗಳನ್ನು ಹಲವು ಭೂಗರ್ಭಶಾಸ್ತ್ರಜ್ಞರು ಮತ್ತು ಪುರಾತನ ವಸ್ತುಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ.
‘ಪುರಾತನ ಡಿಎನ್‌ಎ ವ್ಯವಸ್ಥೆ’ಯಲ್ಲಿ (ಭಾರತದಲ್ಲಿ ಪತ್ತೆಯಾದ) ಉಷ್ಟ್ರಪಕ್ಷಿಯ ಮೊಟ್ಟೆಯ ಹೊರ ಹೊದಿಕೆಯನ್ನು ವಿಶ್ಲೇಷಿಸಿದಾಗ , ಇವು ಅನುವಂಶಿಕವಾಗಿ ಆಫ್ರಿಕಾದ ಉಷ್ಟ್ರಪಕ್ಷಿಗಳ ಮೊಟ್ಟೆಗಳನ್ನು ಹೋಲುತ್ತಿತ್ತು ಮತ್ತು ಇದರ ಇಂಗಾಲಾಂಶದ ಅಧ್ಯಯನದಿಂದ ಇವು ಸುಮಾರು 25 ಸಾವಿರ ವರ್ಷಗಳ ಹಿಂದಿನ ಮೊಟ್ಟೆ ಎಂದು ತಿಳಿದು ಬಂದಿರುವುದಾಗಿ ಸಿಸಿಎಂಬಿಯ ಹಿರಿಯ ಪ್ರಧಾನ ವಿಜ್ಞಾನಿ ಕುಮಾರಸ್ವಾಮಿ ತಂಗರಾಜ್ ತಿಳಿಸಿದ್ದಾರೆ. ‘ಪಿಎಲ್‌ಒಎಸ್ ವನ್’ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ 2017 ಮಾರ್ಚ್ 9ರಂದು ಈ ಅಧ್ಯಯನ ವರದಿ ಪ್ರಕಟವಾಗಿದೆ.
ಸಿಸಿಎಂಬಿಯ ವಿಜ್ಞಾನಿಗಳು ಹಾಗೂ ರೂರ್ಕಿಯ ಐಐಟಿ ವಿಜ್ಞಾನಿಗಳು ಮತ್ತು ಇತರರು ಸೇರಿ ಈ ಅಧ್ಯಯನ ನಡೆಸಿದ್ದರು.
ಗೊಂಡ್ವಾನಾಲ್ಯಾಂಡ್ ಅಥವಾ ಗೊಂಡ್ವಾನಾ ಎಂದು ಕರೆಯಲ್ಪಡುತ್ತಿದ್ದ ಭೂಖಂಡ ಸರಿತವು ಉಷ್ಟ್ರಪಕ್ಷಿಗಳ ಮೂಲ ಮತ್ತು ವಿಕಸನದ ಜೊತೆಗೆ ಸಂಬಂಧ ಹೊಂದಿದೆ. ಸುಮಾರು 150 ಮಿಲಿಯನ್ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ಆಫ್ರಿಕಾ, ಅರೆಬಿಯಾ, ಆಸ್ಟ್ರೇಲಿಯ, ಅಂಟಾರ್ಕ್‌ಟಿಕ, ಭಾರತ ಮತ್ತು ಮಡಗಾಸ್ಕರ್ ಸೇರಿದ ಒಂದು ಮಹಾ ಭೂಖಂಡವಾಗಿತ್ತು ಗೊಂಡ್ವಾನಾಲ್ಯಾಂಡ್.
ಕ್ರೆಟಾಷಿಯಸ್ ಅವಧಿಯ ಆರಂಭದಲ್ಲಿ ಅಂದರೆ 130ರಿಂದ 100 ಮಿಲಿಯನ್ ವರ್ಷಗಳ ಹಿಂದೆ ಈ ಮಹಾ ಭೂಖಂಡದಲ್ಲಿ ಉಂಟಾದ ಪ್ರಾಥಮಿಕ ವಿಂಗಡಣೆಯು ಆಫ್ರಿಕಾ ಮತ್ತು ಇಂಡೊ-ಮಡಗಾಸ್ಕರ್ ಪ್ರದೇಶವನ್ನು ಬೇರ್ಪಡಿಸಿತು.ಈ ಜೈವಿಕ-ಭೌಗೋಳಿಕ ಚದುರುವಿಕೆಯ ಕಾರಣ ಸುಮಾರು 20 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿದ್ದ ಉಷ್ಟ್ರಪಕ್ಷಿಗಳು ಯುರೇಷಿಯಾ(ಯುರೋಪ್ ಮತ್ತು ಏಷ್ಯಾ ಖಂಡಗಳು ಸಂಯೋಜನೆಗೊಂಡು ರೂಪುಗೊಂಡ ಬೃಹತ್ ಭೂಪ್ರದೇಶ) ದಾರಿಯಾಗಿ, ಭೂಮಾರ್ಗದ ಮೂಲಕ ಚದುರಿಹೋದವು.
ಅದಾಗ್ಯೂ, ಭಾರತದಲ್ಲಿ ಉಷ್ಟ್ರಪಕ್ಷಿಗಳ ಅಸ್ತಿತ್ವಕ್ಕೆ ಭೂಖಂಡ ಸರಿತ ಕಾರಣ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಸ್ಯ, ಪ್ರಾಣಿ ಸ್ವರೂಪಶಾಸ್ತ್ರದ ವಿಧಾನದಿಂದ ನಡೆಸಲಾದ ಮೊಟ್ಟೆಯ ಚೂರಿನ ಅಧ್ಯಯನದಿಂದ ಭಾರತದಲ್ಲಿ ಉಷ್ಟ್ರಪಕ್ಷಿಯ ಅಸ್ತಿತ್ವವನ್ನು ನಿರ್ಧರಿಸಲು ಅಸಾಧ್ಯ ಎಂಬ ಕಾರಣದಿಂದ ಈ ಪ್ರಕರಣದಲ್ಲಿ ಸಂಶೋಧಕರು ಪುರಾತನ ಡಿಎನ್‌ಎ ವ್ಯವಸ್ಥೆ ವಿಧಾನದ ಮೂಲಕ ಅಧ್ಯಯನ ನಡೆಸಿದ್ದಾರೆ .
ಆಫ್ರಿಕದ ಉಷ್ಟ್ರಪಕ್ಷಿಗಳ ಮೊಟ್ಟೆಗಳಿಗೆ ಮತ್ತು ಭಾರತದಲ್ಲಿ ದೊರೆತಿರುವ ಮೊಟ್ಟೆಗಳಿಗೆ ಶೇ.92ರಷ್ಟು ಸಮಾನತೆಯಿದೆ ಎಂದು ಈ ಮೊಟ್ಟೆಗಳ ಚೂರಿನಲ್ಲಿರುವ ಡಿಎನ್‌ಎ ಅಂಶಗಳಿಂದ ತಿಳಿದುಬಂದಿದೆ ಎಂದು ಎಂದು ವರದಿಯಲ್ಲಿ ತಿಳಿಸಲಾಗಿದೆ.







