ದೇವಸ್ಥಾನದಲ್ಲಿ ದರ್ಶನ ಶುಲ್ಕ ವಿರೋಧಿಸಿ ಹೈಕೋರ್ಟ್‌ಗೆ ದೂರು

ಮುಂಬೈ, ಮಾ.12: ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ 200 ರೂ. ಶುಲ್ಕ ವಿಧಿಸುತ್ತಿರುವುದನ್ನು ಪ್ರಶ್ನಿಸಿ ದೇವಳದ ಟ್ರಸ್ಟಿಯೋರ್ವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ , ಈ ಬಗ್ಗೆ ಗಮನ ಹರಿಸುವಂತೆ ಬಾಂಬೆ ಹೈಕೋರ್ಟ್ ಧಾರ್ಮಿಕ ದತ್ತಿ ಆಯುಕ್ತರಿಗೆ ಸೂಚಿಸಿದೆ.
ದೇಶದಲ್ಲಿ ಜ್ಯೋತಿರ್ಲಿಂಗ ಹೊಂದಿರುವ 12 ದೇವಳಗಳಲ್ಲಿ ಈ ದೇವಳವೂ ಸೇರಿದ್ದು ಇಲ್ಲಿ ಶಿವನ ಆರಾಧನೆ ನಡೆಯುತ್ತದೆ.
ಈ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ 200 ರೂ. ಶುಲ್ಕ ವಿಧಿಸಲಾಗುತ್ತಿದ್ದು ಇದು ವಿವೇಚನಾರಹಿತ ಕ್ರಮವಾಗಿದೆ ಎಂದು ದೇವಸ್ಥಾನದ ಟ್ರಸ್ಟಿ ಲಲಿತಾ ಶಿಂಧೆ ಎಂಬವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಧೀಶರು ಈ ದೇವಳದ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ.
ತ್ರಯಂಬಕೇಶ್ವರ ದೇವಸ್ಥಾನವು ರಾಷ್ಟ್ರೀಯ ಮಹತ್ವವುಳ್ಳ ಸಂರಕ್ಷಿತ ಸ್ಮಾರಕ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ನೀಡಿರುವ ಪತ್ರದ ಪ್ರತಿಯನ್ನು ತಮ್ಮ ಅರ್ಜಿಯ ಜೊತೆಗೆ ಲಗತ್ತಿಸಿದ್ದರು. ಪುರಾತನ ಸ್ಮಾರಕ ಮತ್ತು ಪುರಾತತ್ವ ಸ್ಥಳ ಪಳೆಯುಳಿಕೆ ಕಾಯ್ದೆಯ ಪ್ರಕಾರ ದರ್ಶನ ಶುಲ್ಕ ವಿಧಿಸುವಂತಿಲ್ಲ ಎಂಬುದು ಇವರ ನಿಲುವಾಗಿದೆ.
ಈ ದೂರು ಅರ್ಜಿಯನ್ನು ಹೈಕೋರ್ಟ್ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಕಳಿಸಿದ್ದು, ಪ್ರಕರಣವನ್ನು ಪರಿಶೀಲಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.







