ರಾಷ್ಟ್ರಪತಿ ಆಯ್ಕೆ ಸಂದರ್ಭ ಬಿಜೆಪಿಗೆ ವರದಾನವಾಗುವ ನಿರೀಕ್ಷೆ
ವಿಧಾನಸಭೆ ಚುನಾವಣೆಯ ಭರ್ಜರಿ ಯಶಸ್ಸು

ಲಕ್ನೊ, ಮಾ.12: ಉತ್ತರಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ದೊರೆತ ಭರ್ಜರಿ ಗೆಲುವು ಮುಂದಿನ ದಿನದಲ್ಲಿ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ಸಂದರ್ಭ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ. ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿ ಜುಲೈಯಲ್ಲಿ ಕೊನೆಗೊಳ್ಳಲಿದೆ.
ಲೋಕಸಭೆಯಲ್ಲಿ 281 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತನ್ನ ಉಮೇದುವಾರರು ರಾಷ್ಟ್ರಪತಿಯಾಗಿ ಆಯ್ಕೆಯಾಗಬೇಕಾದರೆ ಇನ್ನಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರು, 29 ರಾಜ್ಯಗಳ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ, ರಾಷ್ಟ್ರದ ರಾಜಧಾನಿ ದಿಲ್ಲಿ ರಾಜ್ಯದ ಶಾಸಕರು ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾರೆ.ಇಲ್ಲಿ ಪ್ರತಿಯೊಂದು ಸದಸ್ಯರ ಮತಕ್ಕೂ ನಿರ್ದಿಷ್ಟ ವೌಲ್ಯವಿದೆ. ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ಈ ವೌಲ್ಯ ನಿರ್ಧರಿಸಲ್ಪಡುತ್ತದೆ.
ರಾಜ್ಯದ ಜನಸಂಖ್ಯೆಯ ಮೊತ್ತವನ್ನು ಆ ರಾಜ್ಯದ ವಿಧಾನಸಭೆಯ ಶಾಸಕರ ಸಂಖ್ಯೆಯಿಂದ ಭಾಗಿಸಿ, ಬಂದ ಮೊತ್ತವನ್ನು ಮತ್ತೆ 1,000ದಿಂದ ಭಾಗಿಸಿದರೆ ಆ ರಾಜ್ಯದ ಶಾಸಕರ ಮತದ ವೌಲ್ಯ ದೊರೆಯುತ್ತದೆ.
ಬಿಜೆಪಿ ಈಗಾಗಲೇ ಮಹಾರಾಷ್ಟ್ರ, ಗುಜರಾತ್, ಹರ್ಯಾನಾ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಅಸ್ಸಾಂನಲ್ಲಿ ಆಡಳಿತ ಪಕ್ಷವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಮತ್ತು ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷದ ಸರಕಾರದ ಮೈತ್ರಿಪಕ್ಷವಾಗಿದೆ. ಇದೀಗ ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳನ್ನೂ ಭಾರೀ ಬಹುಮತದೊಂದಿಗೆ ತನ್ನ ಬಗಲಿಗೆ ಸಿಕ್ಕಿಸಿಕೊಂಡಿರುವ ಬಿಜೆಪಿಗೆ ರಾಷ್ಟ್ರಪತಿಯಾಗಿ ತನ್ನ ಆಯ್ಕೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಹೆಚ್ಚಿನ ಬಲ ದೊರೆತಂತಾಗಿದೆ. ಉತ್ತರಪ್ರದೇಶವು ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿದೆ.
ಉಪರಾಷ್ಟ್ರಪತಿ ಮುಹಮ್ಮದ್ ಅನ್ಸಾರಿ ಅವರ ಅಧಿಕಾರಾವಧಿಯೂ ಆಗಸ್ಟ್‌ನಲ್ಲಿ ಕೊನೆಗೊಳ್ಳುತ್ತದೆ. ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿರುವ ಬಿಜೆಪಿ, ಉಪರಾಷ್ಟ್ರಪತಿ ಹುದ್ದೆಯನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡುವ ನಿರೀಕ್ಷೆಯಿದೆ.