ಯಡಿಯೂರಪ್ಪ ಧರ್ಮಾಧಿಕಾರಿಯೇ?: ಸಿಎಂ ಸಿದ್ದರಾಮಯ್ಯ

ಮೈಸೂರು, ಮಾ.12: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಧರ್ಮಾಧಿಕಾರಿಯೇ? ಅವರು ಮಾಡಿರುವ ಪಾಪದ ಕೆಲಸಗಳು ಇನ್ನೊಂದು ಜನ್ಮವಾದರೂ ಮುಗಿಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸರ್ಕಾರದ ಅಧರ್ಮದ ಮೇಲೆ ಉಪ ಚುನಾವಣೆಯಲ್ಲಿ ಮತ ಕೇಳುತ್ತೇವೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಚುನಾವಣೆಗಳು ಎಂದರೆ ವೈಯಕ್ತಿಕ ಜಗಳ ಅಲ್ಲ. ಅದು ಸಿದ್ಧಾಂತದ ಮೇಲೆ ನಡೆಯುವಂತದ್ದು. ಬಿಜೆಪಿ ಒಂದು ಕೋಮುವಾದಿ ಪಕ್ಷ. ಶ್ರೀನಿವಾಸ ಪ್ರಸಾದ್ ಅವರು ಆ ಕೋಮುವಾದಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ನಂಜನಗೂಡಿನಲ್ಲಿ ಕೋಮುವಾದಿ ಮತ್ತು ಜಾತ್ಯತೀತ ಪಕ್ಷದ ಮಧ್ಯೆ ಚುನಾವಣೆ ನಡೆಯಲಿದೆ. ಇದು ಬಿಟ್ಟು ನಾನು ಮತ್ತು ಶ್ರೀನಿವಾಸ ಪ್ರಸಾದ್ ವೈಯಕ್ತಿಕವಾಗಿ ಜಗಳ ಮಾಡಲಾಗುವುದೇ? ಎಂದು ಹೇಳಿದರು.
1952ರಿಂದ 9 ಬಾರಿ ನಂಜನಗೂಡಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಬಾರಿಯೂ ಗೆಲ್ಲಲಿದೆ. ಪ್ರಸಾದ್ ಅವರು ಎರಡು ಬಾರಿ ಕಾಂಗ್ರೆಸ್ ನಿಂದಲೇ ಗೆಲುವು ಸಾಧಿಸಿದ್ದರು. ಈಗ ಅವರು ಬಿಜೆಪಿ ಸೇರಿದ್ದಾರೆ. ನಮ್ಮ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ. ಎಐಸಿಸಿ ಜೊತೆಗೆ ಇಡೀ ಸಚಿವ ಸಂಪುಟವೇ ಬಂದರೂ ತಮ್ಮನ್ನು ಸೋಲಿಸಲಾಗದು ಎಂಬ ಶ್ರೀನಿವಾಸ ಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಗಳು, ಪ್ರಸಾದ್ ಅವರು ದೊಡ್ಡ ನಾಯಕರು. ಅವರ ಹೇಳಿಕೆಗೆ ಉತ್ತರಿಸುವುದಿಲ್ಲ ಎಂದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಉಪ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆ ಫಲಿತಾಂಶ ಪರಿಣಾಮ ಬೀರಬಾರದೇಕೆ ? ಉತ್ತರ ಪ್ರದೇಶದ ಫಲಿತಾಂಶವೇ ಯಾಕಗಬೇಕು ಎಂದು ಪ್ರಶ್ನಿಸಿದರು.
ಪಂಜಾಬ್ ನಲ್ಲಿ ಕಾಂಗ್ರೆಸ್ 77 ಸ್ಥಾನಗಳೊಂದಿಗೆ ಬಹುಮತ ಸಾಧಿಸಿದೆ. ಅದು ಪಕ್ಷಕ್ಕೆ ದೊಡ್ಡ ಗೆಲುವು ಅಲ್ಲವೇ, ಗೋವಾ, ಮಣಿಪುರದಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿಲ್ಲವೇ, ಬಿಜೆಪಿ ಉತ್ತರ ಪ್ರದೇಶದಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿ ಇರಲಿಲ್ಲ. ಜೊತೆಗೆ ಜನ ಅಲ್ಲಿ ಬದಲಾವಣೆ ಬಯಸಿರಬಹುದು. ಆಡಳಿತ ವಿರೋಧಿ ಅಲೆ, ಮತಗಳ ಧ್ರುವೀಕರಣ, ಹಿಂದುತ್ವ ಅಸ್ತ್ರ ಪ್ರಯೋಗದಿಂದ ಬಿಜೆಪಿ ಅಲ್ಲಿ ಗೆದ್ದಿದೆ ಎಂದು ಹೇಳಿದರು.
ಸೋಲು, ಗೆಲುವು ಪ್ರಜಾಪ್ರಭುತ್ವ ದಲ್ಲಿ ಸಾಮಾನ್ಯ. ಸೋತಾಕ್ಷಣ ಧೃತಿಗೆಡದೆ ಇನ್ನೂ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತೇವೆ. ಉಪ ಚುನಾವಣೆ ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಸ್ತುವಾರಿ ನೇಮಕ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.







