ಬಿಜೆಪಿಯಿಂದ ಪಕ್ಷೇತರ ಶಾಸಕನ ಅಪಹರಣ : ಮಣಿಪುರ ಕಾಂಗ್ರೆಸ್ ಮುಖಂಡನ ಆರೋಪ

ಇಂಫಾಲಾ/ಹೊಸದಿಲ್ಲಿ, ಮಾ.12: ಯಾವ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ಸ್ಥಿತಿಗೆ ಕಾರಣವಾಗಿರುವ ಮಣಿಪುರ ವಿಧಾನಸಭೆ ಚುನಾವಣೆ ಫಲಿತಾಂಶದ ಗೊಂದಲಕ್ಕೆ ರವಿವಾರ ನಾಟಕೀಯ ತಿರುವು ದೊರೆತಿದೆ. ಕಾಂಗ್ರೆಸ್ ಮತ್ತು ಬಿಜೆಪಿ - ಈ ಎರಡೂ ಪಕ್ಷಗಳು ಸರಕಾರ ರಚನೆಗೆ ಅಗತ್ಯವಿರುವ ಬಹುಮತ ಸಾಧಿಸುವ ಲೆಕ್ಕಾಚಾರದಲ್ಲಿವೆ. ಈ ಮಧ್ಯೆ, ಪಕ್ಷೇತರ ಶಾಸಕರೋರ್ವರನ್ನು ಬಿಜೆಪಿ ಅಪಹರಿಸಿ ಕೋಲ್ಕತ್ತಾಕ್ಕೆ ರವಾನಿಸಿದೆ ಎಂದು ಕಾಂಗ್ರೆಸ್ ಪಕ್ಷದ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದಿರುವ ರಾಜ್ಯದ ಏಕೈಕ ಪಕ್ಷೇತರ ಶಾಸಕ ಅಸಾಬುದ್ದೀನ್‌ರನ್ನು ಇಂಫಾಲ ವಿಮಾನ ನಿಲ್ದಾಣದಿಂದ ಅಪಹರಿಸಿ ಕೋಲ್ಕತ್ತಾಕ್ಕೆ ರವಾನಿಸಲಾಗಿದೆ. ಈ ಅಪಹರಣ ಪ್ರಕರಣದಲ್ಲಿ ಬಿಜೆಪಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸಿಐಎಸ್‌ಎಫ್ ಪಡೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದವರು ಸರಣಿ ಟ್ವೀಟ್ ಮೂಲಕ ದೂರಿದ್ದಾರೆ.
ಗುವಾಹಟಿಯಲ್ಲಿದ್ದ ಅಸಾಬುದ್ದೀನ್‌ರನ್ನು ಕಾಂಗ್ರೆಸ್ ಶಾಸಕ ನಾಸೆರ್ ವಿಮಾನದ ಮೂಲಕ ಇಂಫಾಲಕ್ಕೆ ಕರೆತರುತ್ತಿದ್ದರು. ಇವರನ್ನು ಇಂಫಾಲ ವಿಮಾನ ನಿಲ್ದಾಣದಲ್ಲಿ ತಡೆದ ಬಿಜೆಪಿ, ಬಲವಂತವಾಗಿ ಅಸಾಬುದ್ದೀನ್‌ರನ್ನು ಕೋಲ್ಕತ್ತಾಕ್ಕೆ ರವಾನಿಸಿದೆ. ಅಲ್ಲಿಂದ ದಿಲ್ಲಿಗೆ ಸಾಗಿಸುವ ಶಂಕೆಯಿದೆ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.
60 ಸದಸ್ಯರ ಮಣಿಪುರ ವಿಧಾನಸಭೆಯಲ್ಲಿ 28 ಸ್ಥಾನ ಗೆದ್ದಿರುವ ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 21 ಸ್ಥಾನ ಗೆದ್ದಿರುವ ಬಿಜೆಪಿ ದ್ವಿತೀಯ ಸ್ಥಾನದಲ್ಲಿದೆ. ಬಹುಮತ ಪಡೆಯಲು 31 ಸ್ಥಾನದ ಅಗತ್ಯವಿದ್ದು , ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರ ಸದಸ್ಯರನ್ನು ಸೆಳೆಯಲು ಉಭಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.
ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಪಡೆಯಲು 3 ಸದಸ್ಯರ ಬೆಂಬಲದ ಅಗತ್ಯವಿದೆ. ಬಿಜೆಪಿಗೆ 10 ಸದಸ್ಯರ ಬೆಂಬಲದ ಅಗತ್ಯವಿದೆ. ತಾನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ನಾಲ್ವರು ಸದಸ್ಯರನ್ನು ಹೊಂದಿರುವ ನಾಗಾ ಪೀಪಲ್ಸ್ ಫ್ರಂಟ್(ಎನ್‌ಪಿಎಫ್) ಈಗಾಗಲೇ ಸ್ಪಷ್ಟಪಡಿಸಿದೆ.
ಓರ್ವ ಶಾಸಕರನ್ನು ಹೊಂದಿರುವ ಲೋಕ ಜನಶಕ್ತಿ ಪಾರ್ಟಿ, ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸಿದೆ.
ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ ನಾಲ್ವರು ಸದಸ್ಯರನ್ನು ಹೊಂದಿದ್ದು ತನ್ನ ಬೆಂಬಲ ಯಾರಿಗೆ ಎಂದು ಇನ್ನೂ ಸ್ಪಷ್ಟಪಡಿಸಿಲ್ಲ. ಮೇಘಾಲಯದಲ್ಲಿ ತಮ್ಮ ಪಕ್ಷಕ್ಕೆ ಪ್ರಧಾನ ಇದಿರಾಳಿ ಕಾಂಗ್ರೆಸ್ ಎಂದು ಪಕ್ಷದ ಮುಖಂಡ ಕೊನ್ರಾಡ್ ಸಂಗ್ಮ ಹೇಳಿದ್ದು ಗಮನಾರ್ಹವಾಗಿದೆ.
ತೃಣಮೂಲ ಕಾಂಗ್ರೆಸ್‌ನ ಓರ್ವ ಸದಸ್ಯ ಯಾವ ಪಕ್ಷ ಸರಕಾರ ರಚಿಸುತ್ತದೋ ಆ ಪಕ್ಷದ ಜೊತೆ ಗುರುತಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಈ ಸದಸ್ಯರ ಮೇಲೆ ಪಕ್ಷಕ್ಕೆ ಹೆಚ್ಚಿನ ಹಿಡಿತ ಇಲ್ಲ ಎನ್ನಲಾಗಿದೆ.
ಇನ್ನೋರ್ವರು ಪಕ್ಷೇತರ ಶಾಸಕರಾಗಿದ್ದು, ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಕಾಂಗ್ರೆಸ್ ದೂರಿದೆ.







