ರಾಜೀನಾಮೆ ನೀಡದ ಅಟಾರ್ನಿ ಭರಾರರನ್ನು ವಜಾಗೊಳಿಸಿದ ಟ್ರಂಪ್

ವಾಶಿಂಗ್ಟನ್, ಮಾ. 12:ಅಮೆರಿಕದ ಭಾರತ ಸಂಜಾತ ಅಟಾರ್ನಿ (ಸರಕಾರಿ ವಕೀಲ) ಪ್ರೀತ್ ಭರಾರ ಅವರನ್ನು ಡೊನಾಲ್ಡ್ ಟ್ರಂಪ್ ಆಡಳಿತವು ಶನಿವಾರ ವಜಾಗೊಳಿಸಿದೆ. ಹಿಂದಿನ ಒಬಾಮ ಆಡಳಿತದಿಂದ ನೇಮಕಗೊಂಡಿರುವ 46 ಅಟಾರ್ನಿಗಳು ತಕ್ಷಣ ರಾಜೀನಾಮೆ ನೀಡಬೇಕೆಂಬ ಟ್ರಂಪ್ ಆಡಳಿತದ ಆದೇಶದಂತೆ ನಡೆಯಲು ತಿರಸ್ಕರಿಸಿದ ಬಳಿಕ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.
‘‘ನಾನು ರಾಜೀನಾಮೆ ನೀಡಲಿಲ್ಲ. ಕೆಲವು ಕ್ಷಣಗಳ ಮೊದಲು ನನ್ನನ್ನು ವಜಾಗೊಳಿಸಲಾಗಿದೆ. ಸದರ್ನ್ ಡಿಸ್ಟ್ರಿಕ್ಟ್ ಆಫ್ ನ್ಯೂಯಾರ್ಕ್ (ಎಸ್‌ಡಿಎನ್‌ವೈ) ರಾಜ್ಯದ ಅಟಾರ್ನಿಯಾಗಿರುವುದು ನನ್ನ ವೃತ್ತಿಜೀವನದ ಅತ್ಯಂತ ಶ್ರೇಷ್ಠ ಗೌರವವಾಗಿದೆ’’ ಎಂದು ಭರಾರ ತನ್ನ ವೈಯಕ್ತಿಕ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರದ ವಿರುದ್ಧ ಅಭಿಯಾನದಂತೆ ಕೆಲಸ ಮಾಡಿರುವ 48 ವರ್ಷದ ಭರಾರ, ಅಮೆರಿಕದ ಅತ್ಯಂತ ಪ್ರತಿಷ್ಠಿತ ಫೆಡರಲ್ ಪ್ರಾಸಿಕ್ಯೂಟರ್‌ಗಳ ಪೈಕಿ ಒಬ್ಬರಾಗಿದ್ದಾರೆ.
ತನ್ನ ಆಡಳಿತದಲ್ಲಿ ಮುಂದುವರಿಯುವಂತೆ ಕಳೆದ ವರ್ಷ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಟ್ರಂಪ್, ಭರಾರರನ್ನು ಕೇಳಿಕೊಂಡಿದ್ದರು ಎನ್ನಲಾಗಿದೆ. ಹಾಗಾಗಿ, ಈಗ ರಾಜೀನಾಮೆ ನೀಡುವಂತೆ ಸೂಚಿಸುವ ಆದೇಶದ ಬಗ್ಗೆ ಭರಾರ ಕಚೇರಿ ಆಘಾತ ವ್ಯಕ್ತಪಡಿಸಿದೆ.







