ಮಂಗಳೂರು: ವಿಚಾರಣಾಧೀನ ಕೈದಿ ಪರಾರಿ ಪ್ರಕರಣ; ಡಿಐಜಿ ಟಿ.ಪಿ. ಶೇಷ ಕಾರಾಗೃಹಕ್ಕೆ ಭೇಟಿ
ಮಂಗಳೂರು, ಮಾ. 12: ನಗರದ ಜಿಲ್ಲಾ ಕಾರಾಗೃಹದಿಂದ ಶುಕ್ರವಾರ ಬೆಳಗ್ಗೆ ವಿಚಾರಣಾಧೀನ ಕೈದಿ ಜಿನ್ನಪ್ಪ (43) ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖೆಗೆ ನೇಮಕಗೊಂಡ ಬೆಳಗಾವಿ ಡಿಐಜಿ ಟಿ.ಪಿ. ಶೇಷ ನೇತೃತ್ವದ ತಂಡ ರವಿವಾರ ಕಾರಾಗೃಹಕ್ಕೆ ಭೇಟಿ ನೀಡಿ ತನಿಖೆ ನಡೆಸಿದೆ.
ತಂಡದಲ್ಲಿ ಬೆಳಗಾವಿ ಡಿಐಜಿ ಟಿ.ಪಿ. ಶೇಷ, ಅಧಿಕಾರಿ ಎಸ್.ಆರ್. ಭಟ್ ಮತ್ತಿತರ ಸಿಬ್ಬಂದಿ ಇದ್ದರು. ಬೆಳಗ್ಗೆ 8:15ಕ್ಕೆ ಬಂದ ತಂಡ ಮಧ್ಯಾಹ್ನ 12:45ರವರೆಗೆ ವಿಚಾರಣೆ ನಡೆಸಿದೆ.
ಜೈಲ್‌ನ ಸೂಪರಿಂಡೆಂಟ್ ಕೃಷ್ಣಮೂರ್ತಿ, ಜೈಲ್ ಅಧಿಕಾರಿಗಳು, ಸಿಬ್ಬಂದಿಗಳಿಂದ ಹೇಳಿಕೆ ಪಡೆದುಕೊಂಡ ಅವರು, ಬಳಿಕ ಕೈದಿ ಜಿನ್ನಪ್ಪಜತೆ ಅಡುಗೆ ಕೆಲಸ ಮಾಡುತ್ತಿದ್ದ 3 ಮಂದಿ ಸಹಕೈದಿಗಳು, ರಾತ್ರಿ ಹೊತ್ತು ಭದ್ರತೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದರು. ಕೈದಿ ಪರಾರಿಯಾದ ಸಂದರ್ಭ ಸಿಸಿ ಟಿವಿಯಲ್ಲಿ ದಾಖಲಾದ ತುಣುಕುಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಎರಡು ದಿನಗಳೊಳಗೆ ವರದಿ:
ಕೈದಿ ಜಿನ್ನಪ್ಪ ಪರಾರಿ ವಿಷಯಕ್ಕೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಇದರ ವರದಿಯನ್ನು 2 ದಿನದೊಳಗೆ ಬಂಧಿಖಾನೆ ಡಿಜಿ ಸತ್ಯನಾರಾಯಣ ರಾವ್ ಅವರಿಗೆ ಸಲ್ಲಿಸುವುದಾಗಿ ಡಿಐಜಿ ಟಿ.ಪಿ. ಶೇಷ ತಿಳಿಸಿದರು.





