ವಿಷ ಆಹಾರ ಪ್ರಕರಣದಲ್ಲಿ ನಾಲ್ಕನೆ ಸಾವು: ವಿದ್ಯಾವಾರಿಧಿ ಶಾಲೆ ಮುಂದೆ ಶವವಿಟ್ಟು ಪ್ರತಿಭಟನೆ
ಶಾಲೆಯಿಂದ 5 ಲಕ್ಷ ರೂ ಪರಿಹಾರದ ಭರವಸೆ; ಪ್ರತಿಭಟನಕಾರರು ಮತ್ತು ಎಸೈ ನಡುವೆ ಮಾತಿನ ಚಕಮಕಿ

ಚಿಕ್ಕನಾಯಕನಹಳ್ಳಿ, ಮಾ.12: ವಿದ್ಯಾವಾರಿಧಿ ಶಾಲೆಯ ವಿಷ ಆಹಾರ ಪ್ರಕರಣದಲ್ಲಿ ನಾಲ್ಕು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡಿ ರವಿವಾರ ಬೆಳಗ್ಗೆ ಸಾವನ್ನಪ್ಪಿದ ಸೆಕ್ಯೂರಿಟಿ ಗಾರ್ಡ್ ರಮೇಶ್ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಲೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ ಘಟನೆ ರಾತ್ರಿ 7:30ರ ಸುಮಾರಿನಲ್ಲಿ ನಡೆಯಿತು.
ರಮೇಶ್ ಸಾವನ್ನಪ್ಪಿದ ಬೆನ್ನಲ್ಲೇ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕೆನ್ನುವ ಕೂಗು ಆರಂಭವಾಯಿತು. ಆಡಳಿತ ಮಂಡಳಿ 1 ಲಕ್ಷ ರೂ. ಪರಿಹಾರ ಕೊಡುವ ಭರವಸೆಯನ್ನು ತುಮಕೂರಿನಲ್ಲೇ ಕೊಟ್ಟರು. ಆದರೆ ಹೆಚ್ಚಿನ ಪರಿಹಾರಕ್ಕೆ ಬೇಡಿಕೆಯಿಟ್ಟರು. ಶವಪರೀಕ್ಷೆ ನಡೆಯುವವರೆವಿಗೂ ಪರಿಹಾರ ಮೊತ್ತದ ವಿಚಾರಗಾಗಿ ಸಂಧಾನವಾಗಲಿಲ್ಲ.
ಕೊನೆಗೆ ರಾಜ್ಯ ಉಪ್ಪಾರ ಸಮಾಜದ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಕಲ್ಲೇಶ್ ಹಾಗೂ ತಾಪಂ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ಜಯಣ್ಣ ಅವರ ನೇತೃತ್ವ ತಂಡ ತುಮಕೂರು ತಲುಪಿ ಪರಿಹಾರ ಕೊಡಿಸುವ ವಿಚಾರದಲ್ಲಿ ರಮೇಶ್ ಪರ ವಕಾಲತ್ತು ವಹಿಸಿದರು.
ಅಂತಿಮವಾಗಿ 3 ಲಕ್ಷ ರೂ. ಪರಿಹಾರ ಕೊಡುವುದಾಗಿ ಆಡಳಿತ ಮಂಡಳಿ ಪರವಾಗಿ ಆಶ್ವಾಸನೆ ನೀಡಲಾಯಿತ್ತಾದರೂ ಒಪ್ಪದೆ ಶಾಲೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಘೋಷಿಸಿದರು.
ತುಮಕೂರಿನಿಂದ ಹುಳಿಯಾರಿಗೆ ಮೃತ ದೇಹ ತರುವ ಮಾರ್ಗಮದ್ಯೆ ಶಾಲೆಯ ಆಡಳಿತ ಮಂಡಳಿಯ ಒಂದೊಂದು ತಂಡ ಒಂದೊಂದು ಕಡೆ ಮಾತುಕತೆ ನಡೆಸಿ ಪ್ರತಿಭಟನೆ ಹಿಂಪಡೆಯುವ ಮನವಿ ಮಾಡಿತು. ಅಂತಿಮವಾಗಿ ಆಂಬ್ಯೂಲೆನ್ಸ್ ಹುಳಿಯಾರು ಹೋಬಳಿಯ ಚಿಕ್ಕಬಿದರೆ ಸಮೀಪಿಸುವಷ್ಟರಲ್ಲಿ 5 ಲಕ್ಷ ರೂ.ಪರಿಹಾರ ಕೊಡುವ ಭರವಸೆ ಕೊಟ್ಟರು.
ಪರಿಹಾರ ಕೊಡಿಸುವ ನೇತೃತ್ವ ವಹಿಸಿದ್ದ ತಂಡ 5 ಲಕ್ಷ ರೂ.ಗೆ ಒಪ್ಪಿಗೆ ಸೂಚಿಸಿ ಪ್ರತಿಭಟನೆ ಮಾಡದಿರುವ ತೀರ್ಮಾನಕ್ಕೆ ಬಂದರು. ಆದರೆ ಅಷ್ಟರಲ್ಲಿ ವಿದ್ಯಾವಾರಿಧಿ ಶಾಲೆಯ ಬಳಿ ಮೃತ ರಮೇಶ್ ಪರವಾಗಿ ರಕ್ತ ಸಂಬಂಧಿಕರೂ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ದೂರವಾಣಿ ಮೂಲಕ ಅವರಿಗೆ 5 ಲಕ್ಷ ಕೊಡಲು ಒಪ್ಪಿದ್ದಾರೆಂದರೂ ಗ್ರಾಮಸ್ಥರ ಮುಂದೆಯೇ ಮಾತುಕತೆಯಾಗಬೇಕು ಹಾಗೂ ಚೆಕ್ ಮೂಲಕ ಕೊಡದೆ ಈಗಲೇ ಕ್ಯಾಷ್ ಕೊಡಬೇಕು ಹಾಗೂ ಹೆಚ್ಚಿನ ಪರಿಹಾರ ಕೊಡಬೇಕು ಅಲ್ಲಿಯವರೆವಿಗೂ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದರು.
ವಿದ್ಯಾವಾರಿಧಿ ಶಾಲೆಯ ಅಧ್ಯಕ್ಷ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ವಿರುದ್ಧ ಘೋಷಣೆ ಕೂಗುತ್ತ ರಸ್ತೆಗೆ ಕಲ್ಲು ಹಾಕಿ ರಸ್ತೆ ತಡೆಗೆ ಮುಂದಾದರು. ತಕ್ಷಣ ಪಿಎಸೈ ಪ್ರವೀಣ್ ಅವರು ರಸ್ತೆ ತಡೆ ಮಾಡುವುದನ್ನು ತಡೆಯಲು ಹೋದರು. ಈ ಸಂದರ್ಭದಲ್ಲಿ ಪಿಎಸೈ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಶಾಲೆಯ ಮುಂದೆ ಶಾಂತಿಯುತ ಪ್ರತಿಭಟನೆ ಮಾಡಿ ಆದರೆ ರಸ್ತೆ ತಡೆಗೆ ಅವಕಾಶ ನೀಡುವುದಿಲ್ಲವೆಂದು ರಸ್ತೆಗೆ ಹಾಕಿದ್ದ ಕಲ್ಲನ್ನು ಪೋಲಿಸರಿಂದ ಎತ್ತಿಸಿ ಹೊರಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಷ್ಟರಲ್ಲಿ ಪರಿಹಾರ ಕೊಡಿಸುವ ನೇತೃತ್ವ ವಹಿಸಿದ್ದ ಜಿಪಂ ಸದಸ್ಯ ಕಲ್ಲೇಶ್ ಹಾಗೂ ತಾಪಂ ಮಾಜಿ ಉಪಾದ್ಯಕ್ಷ ಜಯಣ್ಣ ಸ್ಥಳಕ್ಕೆ ಆಗಮಿಸಿ 5 ಲಕ್ಷ ರೂ. ಚೆಕ್ ಕೊಡಲು ಒಪ್ಪಿದ್ದು ಪ್ರತಿಭಟನೆ ಮಾಡೋದು ಬೇಡ ಎಂದು ಕೇಳಿಕೊಂಡರು.
ಅಷ್ಟರಲ್ಲಿ ಮೃತ ದೇಹವೊತ್ತ ಆಂಬ್ಯೂಲೆನ್ಸ್ ಶಾಲೆಯ ಮುಂಭಾಗದಿಂದ ನೇರವಾಗಿ ಹೊಸಹಳ್ಳಿಗೆ ಹೋಗುತ್ತಿತ್ತು. ವಿಷಯ ತಿಳಿದ ಜನರು ರಸ್ತೆಗೆ ಅಡ್ಡಲಾಗಿ ನಿಂತು ಆಂಬ್ಯೂಲೆನ್ಸ್ ತಡೆದು ಶವ ಇಲ್ಲಿಯೇ ಇಳಿಸುವಂತೆ ಒತ್ತಾಯಿಸಿದರು. ಪೊಲೀಸರು ಆಂಬ್ಯೂಲೆನ್ಸ್ ಕಳುಹಿಸಲು ಹರಸಾಹಸ ಪಟ್ಟರಾದರೂ ಜನ ಅಡ್ಡಕ್ಕೆ ನಿಂತಿ ಕಿರಣ್ ವಿರುದ್ಧ ಘೋಷಣೆ ಕೂಗಿ ರಸ್ತೆಯುದ್ದಕ್ಕೂ ಅಡ್ಡಲಾಗಿ ನಿಂತರು. ಅಂತಿಮವಾಗಿ ಆಂಬ್ಯೂಲೆನ್ಸ್ ಶಾಲೆಯ ಮುಂದೆ ತಂದು ನಿಲ್ಲಿಸಿ ಪರಿಹಾರ ಹಣಕ್ಕಾಗಿ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಮಹಿಳೆಯರು ಹಾಗೂ ರಕ್ತ ಸಂಬಂಧಿಗಳು ಮೃತ ದೇಹದ ಎದುರು ಬಿಕ್ಕುಬಿಕ್ಕಿ ಅಳುತ್ತಿದ್ದರು. ಇತ್ತ ಉಳಿದವರು ಹೆಚ್ಚಿನ ಪರಿಹಾರ ಕೊಡದ ವಿನಹ ಮೃತ ದೇಹ ತೆಗೆದುಕೊಂಡು ಹೋಗುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಪೊಲೀಸರು ಪುನಃ ಕಲ್ಲೇಶ್ ಹಾಗೂ ಜಯಣ್ಣ ಕರೆಸಿ ಬಗೆಹರಿಸಲು ತಿಳಿಸಿದರು. ಆಗ ಶವಸಂಸ್ಕಾರಕ್ಕೆ 10 ಸಾವಿರ ರೂ, ನಗದು ಕೊಟ್ಟು. ಆಡಳಿತ ಮಂಡಳಿಯ 5 ಲಕ್ಷ ರೂ. ನಗದು ಹಣವನ್ನು ಬರುವ ಗುರುವಾರ ನಾವಿಬ್ಬರೆ ತಂದು ಕೊಡಲು ಬದ್ಧರಾಗಿದ್ದು ಜಿಪಂ ಅನುದಾನಲ್ಲಿ 2 ಲಕ್ಷ ರೂ. ಗ್ರ್ಯಾಂಟ್ ಕೊಟ್ಟು ಆರ್ಥಿಕ ಸಹಾಯ ಮಾಡುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸಿದರು.







