ತಳಮಟ್ಟದ ಜನಸಾಮಾನ್ಯರು ಉಚಿತ ವೈದ್ಯಕೀಯ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಡಾ.ಮನೋಹರ್ ಆಚಾರ್

ಪುತ್ತೂರು, ಮಾ.12: ತಳಮಟ್ಟದ ಜನಸಾಮಾನ್ಯರನ್ನು ತಲುಪಬೇಕು ಎಂಬ ದೃಷ್ಟಿಯಿಂದ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲರೂ ಆರೋಗ್ಯದ ದೃಷ್ಟಿಯಿಂದ ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಂಗಳೂರು ವಿಶ್ವಕರ್ಮ ವೈದ್ಯರ ಸಂಘದ ಸದಸ್ಯ ಡಾ.ಮನೋಹರ್ ಆಚಾರ್ ಹೇಳಿದರು.
ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಸ್ನೇಹಾ, ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಎಂ.ಸುರೇಶ್, ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಕೆ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ವಸಂತಿ ಉಪಸ್ಥಿತರಿದ್ದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಎಸ್.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಕಿಶನ್ ಬಿ.ವಿ. ಸ್ವಾಗತಿಸಿ, ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ವಾಣಿನವೀನ್ ವಂದಿಸಿದರು. ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಹೃದಯ ರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಕಿವಿ, ಮೂಗು, ಗಂಟಲುರೋಗ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಮಕ್ಕಳರೋಗ ಚಿಕಿತ್ಸೆ, ಜನರಲ್ ಮೆಡಿಸಿನ್ ವಿಭಾಗದ ತಪಾಸಣೆಯನ್ನು ಶಿಬಿರದಲ್ಲಿ ಉಚಿತವಾಗಿ ಮಾಡಲಾಯಿತು. ಎಲ್ಲಾ ಸಮುದಾಯದ ಸುಮಾರು 350ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. 100ಕ್ಕೂ ಅಧಿಕ ಮಂದಿಗೆ ಹಸಿರು ಕಾರ್ಡ್ ನೀಡಿದ್ದು, ಮಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು.
ಬೊಳುವಾರು ವಿಶ್ವಕರ್ಮ ಯುವ ಸಮಾಜ, ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಮಹಿಳಾ ಮಂಡಳಿ, ಮಂಗಳೂರು ವಿಶ್ವಕರ್ಮ ವೈದ್ಯರ ಸಂಘದ ಆಶ್ರಯದಲ್ಲಿ ಅತ್ತಾವರ ಕೆಎಂಸಿ ಆಸ್ಪತ್ರೆ ಹಾಗೂ ಜ್ಯೋತಿ ಕೆಎಂಸಿ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿಕೊಟ್ಟರು.







