ಕೆ.ಸಿ.ರೋಡ್: ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಉಳ್ಳಾಲ, ಮಾ.12: ಪುಸ್ತಕದಿಂದ ಮಾತ್ರ ಜ್ಞಾನ ವೃದ್ಧಿಸಲು ಸಾಧ್ಯ. ಧರ್ವ ದೇವಾಲಯಗಳ ಬದಲು ಅಲ್ಲಲ್ಲಿ ಗ್ರಂಥಾಲಯಗಳ ಸ್ಥಾಪನೆಯಿಂದ ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ವೃದ್ಧಿಸುವುದರ ಜತೆಗೆ ಸಮಾಜಕ್ಕೆ ಪೂರಕವಾಗಿರುವ ವಾತಾವರಣದಲ್ಲಿ ಬೆಳೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಹೇಳಿದರು.
ಅವರು ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈಝೇಶನ್ ಇದರ ವತಿಯಿಂದ ರವಿವಾರ ಕೆ.ಸಿ.ರೋಡ್ ನಲ್ಲಿ ನಡೆದ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಗಳೂರಿನ ಕುರಿತು ಹೊರಗಿನ ಜನತೆಗೆ ವಾತಾವರಣ ಸ್ಪಷ್ಟವಾಗಿಲ್ಲ, ಈ ನಿಟ್ಟಿನಲ್ಲಿ ಇಲ್ಲಿನ ಜನರಲ್ಲಿ ಮಾನಸಿಕ ಹಾಗೂ ಭೌತಿಕ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಚರ್ಚ್, ಮಸೀದಿ, ದೇವಸ್ಥಾನಗಳ ಸ್ಥಾಪನೆಯ ಬದಲು ಗ್ರಂಥಾಲಯಗಳ ಸ್ಥಾಪನೆಯಾಗಬೇಕಿದೆ ಎಂದ ಅವರು ಜನರಲ್ಲಿ ರಾಜಕೀಯ ಆಸಕ್ತಿಗಳು ಇರಬೇಕು. ಆದರೆ ರಾಜಕೀಯಪ್ರೇರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ತಮ್ಮ ಹಕ್ಕುಗಳನ್ನು ಪಡೆಯುವ ಜ್ಞಾನ ನಾಗರೀಕರಲ್ಲಿ ಇಲ್ಲವಾಗಿದೆ. ಸರಕಾರಿ ಪಾರದರ್ಶಕತೆಯನ್ನು ಚರ್ಚಿಸುವ ಮೂಲಕ ವೈಚಾರಿಕತೆಯ ಹಿನ್ನೆಲೆಯ ಆಧಾರದಲ್ಲಿ ಎಲ್ಲರೂ ನಡೆಯುವ ಅನಿವಾರ್ಯತೆ ಇದೆ ಎಂದರು.
ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈಝೇಶನ್ನಿನ ಉದ್ಘಾಟನೆಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್ಗನೈಸೇಷನ್ನಿನ ಸಂಚಾಲಕ ಸಿದ್ಧೀಖ್ ತಲಪಾಡಿ ಮಾತನಾಡಿ ರಾಜಕೀಯ ರಹಿತವಾದ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಸಂಘಟನೆ ಶ್ರಮಿಸಲಿದೆ. ಇದರ ಸದಸ್ಯರು ಸೇರಿಕೊಂಡು ಹಿಂದೆ ತಲಪಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರವೂ ಸಿಕ್ಕಿದೆ. ಮುಂದೆಯೂ ಜನಪರ ಯೋಜನೆಗಳಿಗಾಗಿ ಶ್ರಮಿಸಲಿರುವ ಸಂಘಟನೆ ಸಾಮಾಜಿಕ ಭಾವನೆಯನ್ನು ಜನರಲ್ಲಿ ಮೂಡಿಸುವ ಕಾರ್ಯದಲ್ಲಿ ಮುಂದಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಅವರನ್ನು ಸನ್ಮಾನಿಸಲಾಯಿತು.
ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈಸೇಷನ್ನಿನ ಅಧ್ಯಕ್ಷ ಆಸೀಫ್ ಕೆ.ಸಿ.ನಗರ , ಕೆ.ಸಿ.ನಗರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಕೆ.ಸಿ.ನಗರ, ಉದ್ಯಮಿಗಳಾದ ಝೀನತ್ ಅಬ್ದುಲ್ ಖಾದರ್, ಅಶ್ಫಾಕ್ ಕೆ.ಸಿ.ರೋಡ್ , ಅಜ್ಜಿನಡ್ಕ ಜುಮಾಮಸೀದಿಯ ಅಹಮ್ಮದ್ ಅಜ್ಜಿನಡ್ಕ, ಯುಎಸ್‌ಡಬ್ಲ್ಯುಎಫ್‌ಒ ಇದರ ಮಜೀದ್ ತಲಪಾಡಿ, ಯುಎಸ್‌ಡಬ್ಲ್ಯುಎಫ್‌ಒ ಇದರ ಕೋಶಾಧಿಕಾರಿ ಫಾರುಕ್ ಕೆ.ಸಿ.ರೋಡ್, ಸಮಾಜ ಸೇವಕ ಐಸಿನ್ ತಲಪಾಡಿ, ಉದ್ಯಮಿ ರಹೀಂ.ಬಿ.ಎಂ.ಉಚ್ಚಿಲ್, ಡೈಮಂಡ್ ವೆಲ್ಫೇರ್ ಅಸೋಸಿಯೇಷನ್ನಿನ ಅಧ್ಯಕ್ಷ ಸಂಶುದ್ಧೀನ್ ಉಚ್ಚಿಲ, ಹಿರಿಯರಾದ ಮೊಯ್ದೀನ್ ಕುಂಞಿ ಕೆ.ಸಿ.ನಗರ, ಉದ್ಯಮಿ ಸಲೀಂ ಪಂಜಾಳ ಉಪಸ್ಥಿತರಿದ್ದರು.
ಶಬೀರ್ ಕೆ.ಸಿ.ರೋಡು ಕಾರ್ಯುಕ್ರಮ ನಿರ್ವಹಿಸಿದರು. ಶಾಫಿ ಕೆ.ಸಿ.ನಗರ ವಂದಿಸಿದರು.







