ರಾಜ್ಯ ಕೈಗಾರಿಕಾ ನೀತಿ ದೇಶಕ್ಕೆ ಮಾದರಿ: ದೇಶಪಾಂಡೆ

ಭಟ್ಕಳ, ಮಾ.12: ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಸರ್ಪನಕಟ್ಟೆ ಕೃಗಾರಿಕಾ ಪ್ರದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯಿಂದಾಗಿ ಹಲವು ಉದ್ಯೋಗಗಳು ಸೃಷ್ಟಿಯಾಗಿವೆ. ಉದ್ಯಮಿಗಳಿಗೆ ನಿವೇಶನಗಳನ್ನು ನೀಡುವುದು ಅದನ್ನು ಮಾರಾಟ ಮಾಡಿ ಹಣಗಳಿಸುವುದಕ್ಕಲ್ಲ, ಕೈಗಾರಿಕೆಗಳು ಬೆಳೆಯುವ ಉದ್ದೇಶದಿಂದ ಸರಕಾರ ಉದ್ಯಮಿಗಳಿಗೆ ನಿವೇಶನ ನೀಡುತ್ತದೆ ಎಂದರು. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಸರಕಾರದಿಂದ 17ಕೋಟಿ ರೂ. ಜಿಲ್ಲೆಗೆ ಬಿಡುಗಡೆಗೊಂಡಿದೆ, ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗಿದ್ದು, ಮಹಿಳೆಯರು, ಪ.ಜಾ, ಪ.ಪಂಗಡದ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಪ್ರಗತಿಯಲ್ಲಿದೆ. ಮುರುಡೇಶ್ವರ ಕ್ಷೇತ್ರಕ್ಕೆ 2.5ಕೋಟಿ ರೂ. ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ಶಾಸಕ ಮಾಂಕಾಳ್ ಎಸ್.ವೈದ್ಯ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ, ತಾ.ಪಂ ಅಧ್ಯಕ್ಷ ಈಶ್ವರ್ ಬಿಳಿಯಾ ನಾಯ್ಕ, ಉ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಅಲ್ಪಸಂಖ್ಯಾತ ನಿಗಮ ಮಂಡಳಿ ನಿರ್ದೇಶಕ ಶೈಲೇಂದ್ರ ಗೌಡ, ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ್, ಭಟ್ಕಳ ಕೈಗಾರಿಕೋದ್ಯಮಿ ಸಂಘದ ಅಧ್ಯಕ್ಷ ಸಿರಾಜುದ್ದೀನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.





