ಎನ್‌ಸಿಇಆರ್‌ಟಿ ಪಠ್ಯಕ್ರಮ 9, 10ನೆ ತರಗತಿಗಳಿಗೆ ಅಳವಡಿಕೆ: ಸಚಿವ ತನ್ವೀರ್‌ಸೇಠ್
ಕಡೂರು 4ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಕಡೂರು, ಮಾ. 12: ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು 9 ಮತ್ತು 10ನೆ ತರಗತಿಗಳಿಗೆ ಅಳವಡಿಸಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.
ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ನಡೆಯುತ್ತಿರುವ 4ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಮಾತೃಭಾಷಾ ಶಿಕ್ಷಣ ಇಂದಿನ ಆತಂಕ’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಪರೀಕ್ಷಾ ಪದ್ಧತಿಯಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ಉತ್ತಮ ಗುಣಮಟ್ಟದ್ದಾಗಿರಬೇಕು. ಹಾಗಾಗ ಬೇಕಾದರೆ ಪ್ರತಿಯೊಬ್ಬ ಶಿಕ್ಷಕರೂ ಅತ್ಯಂತ ಪ್ರಾಮಾಣಿಕವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದ ಅವರು, ಈ ಬಾರಿ 10 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ ಎಂದು ಹೇಳಿದರು.
ಶಿಕ್ಷಣ ಹಕ್ಕು ಕಾಯ್ದೆ ಸಾಧಕ ಬಾಧಕಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಶಾಸಕ ವೈ.ಎಸ್.ವಿ ದತ್ತ, ಆರ್‌ಟಿಇ ಹಕ್ಕಿನ ಮೂಲಕ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಆಶಯ ಸರಿಯಾಗಿದೆ. ಆದರೆ, ಆರ್‌ಟಿಇ ಯೋಜನೆಯಲ್ಲಿ 4.41 ಸಾವಿರ ಮಕ್ಕಳನ್ನು ಕನ್ನಡ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗಳಿಗೆ ಸರಕಾರವೇ ಸೇರಿಸಿದೆ.
ಅಲ್ಲದೆ ಇದಕ್ಕಾಗಿ 1,400 ಕೋಟಿ ಹಣವನ್ನು ನೀಡಿದೆ. ಆದರೆ, ಕನ್ನಡ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸುವಲ್ಲಿ ಸರಕಾರ ವಿಫಲವಾಗುತ್ತಿದೆ. ಕನ್ನಡ ಶಾಲೆಗಳು ಉಳಿಯಬೇಕೆಂದರೆ ಸಮಾನ ಶಿಕ್ಷಣ ನೀತಿ ಜಾರಿಗೆ ಬರಬೇಕು. ರಾಜ್ಯ ಸರಕಾರ ಖಾಲಿ ಇರುವ 13 ಸಾವಿರ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಕನ್ನಡ ಶಾಲೆಗಳ ಸ್ಥಿತಿಗತಿ, ಉನ್ನತ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ ವಿಚಾರದ ಕುರಿತು ಮಾತನಾಡಿದ ಮೂಡುಬಿದಿರೆ ಆಳ್ವಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಕನ್ನಡ ಶಾಲೆಗಳು ಉಳಿದರೆ ಜನಸಾಮಾನ್ಯ ಮತ್ತು ರಾಜ್ಯದ ಸಂಸ್ಕೃತಿ ಉಳಿದಂತೆ. ಯಾವ ಮಾಧ್ಯಮವೇ ಇರಲಿ, ಶಿಕ್ಷಣ ಸಮಾನವಾಗಿದ್ದರೆ ಅದು ಅತ್ಯಂತ ಉಪಯೋಗಕಾರಿ ಎಂದರು.
ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ನಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಆದರೆ ಜ್ಞಾನ, ವಿವೇಕ, ಅರಿವು ನೀಡುತ್ತಿಲ್ಲ. ಶಿಕ್ಷಣದಲ್ಲಿ ಸುಧಾರಣೆಯಾಗಬೇಕಾದರೆ ಸಮಾನ ಶಿಕ್ಷಣ ಸಿಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ತಾರತಮ್ಯ ದೂರವಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಹಿರೇಮಗಳೂರು ಕಣ್ಣನ್, ಸಮ್ಮೇಳನಾಧ್ಯಕ್ಷ ಪ್ರ್ರೊ.ಓಂಕಾರಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಬೆಳ್ಳಿಪ್ರಕಾಶ್, ಕಾರ್ಯಾಧ್ಯಕ್ಷ ಕೆ.ಆರ್.ಮಹೇಶ್ ಒಡೆಯರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಪ್ಪ, ಡಿ.ಸಿ.ಎನ್. ಶೇಖರಪ್ಪ ಉಪಸ್ಥಿತರಿದ್ದರು.
ಕನ್ನಡ ಭಾಷೆ ಯಾರದೋ ದಾಳಿಗೆ ಅವನತಿ ಹೊಂದುವ ಭಾಷೆಯಲ್ಲ. ನಮ್ಮ ಭಾಷೆಗೆ ಯಾವ ಭಾಷೆಗಿಲ್ಲದಷ್ಟು ಇತಿಹಾಸವಿದೆ. ಕನ್ನಡ ಭಾಷೆಗೆ ಅನೇಕ ಸವಾಲುಗಳಿವೆಯಾದರೂ ಇತ್ತೀಚೆಗೆ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡುತ್ತಿದೆ. ಬೆಂಗಳೂರಿನಲ್ಲಿ ಮೊದಲು ತಮಿಳು ಮತ್ತು ತೆಲಗು ಮಾತನಾಡುವ ಭಾಷಿಕರನ್ನು ಮಾತ್ರ ಕಾಣುತ್ತಿದ್ದೆವು. ಆದರೆ ಈಗ ಉತ್ತರ ಭಾರತದ ಹಿಂದಿ ಮಾತನಾಡುವವರ ಸಂಖ್ಯೆ ಅಧಿಕವಾಗಿ ಕಾಣುತ್ತಿದ್ದೇವೆ.
ಇದರಿಂದಾಗಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಕುತ್ತು ಬರಲಿದೆ ಎಂಬ ಚರ್ಚೆ ನಡೆಯುತ್ತಿದೆ. ಕನ್ನಡಕ್ಕೆ ತನ್ನದೆಯಾದ ಗಟ್ಟಿತನವಿದ್ದು ಕನ್ನಡ ಅಷ್ಟು ಸುಲಭವಾಗಿ ಅಳಿದು ಹೋಗುವ ಭಾಷೆಯಲ್ಲ. ಡಿ.ಎಚ್. ಶಂಕರಮೂರ್ತಿ, ವಿಧಾನಪರಿಷತ್ ಸಭಾಪತಿ
ಮಾತೃಭಾಷಾ ಶಿಕ್ಷಣ ಆಯಾ ಪ್ರಾದೇಶಿಕ ರಾಜ್ಯಗಳ ಹಕ್ಕಾಗಿದೆ. ಆದರೆ ಅದನ್ನು ಪಡೆಯುವಲ್ಲಿ ಎಲ್ಲ ರಾಜ್ಯಗಳು ವಿಫಲವಾಗಿವೆ. ನಮ್ಮ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಸರಕಾರವೇ ವ್ಯವಸ್ಥಿತವಾಗಿ ಕೊಲ್ಲುವ ಹುನ್ನಾರ ನಡೆಸುತ್ತಿದೆ. -ಶಾಸಕ ವೈ.ಎಸ್.ವಿ ದತ್ತ







