ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ: ಸಚಿವ ಜಯಚಂದ್ರ ಸೂಚನೆ
ಭದ್ರಾ ಮೇಲ್ದಂಡೆ ಯೋಜನೆ

ಚಿಕ್ಕಮಗಳೂರು, ಮಾ.12: ಬರ ಪೀಡಿತ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ‘ಭದ್ರಾ ಮೇಲ್ದಂಡೆ ಯೋಜನೆ’ಯ ಕಾಮಗಾರಿಯನ್ನು ಮುಂದಿನ ಡಿಸೆಂಬರ್ ಒಳಗೆ ಪೂರ್ಣಗೊಳಿಸುವಂತೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ ಜಯಚಂದ್ರ ಅವರು, ಅಧಿಕಾರಿಗಳಿಗೆ ಸೂಚಿಸಿದರು.
ತರೀಕೆರೆ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ವಿಕ್ಷೀಸಿ, ನಂತರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನ ಸಭೆೆ ನಡೆಸಿ ಮಾತನಾಡಿದ ಅವರು, ತುಂಗಾ ನದಿಯ ಹೆಚ್ಚುವರಿ ನೀರನ್ನು ಭದ್ರಾ ಅಣ್ಣೆಕಟ್ಟಗೆ ತಿರುಗಿಸಿ, ಬರಗಾಲ ಪೀಡಿತ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯ ನಿಗಮದ ವತಿಯಿಂದ ಸುಮಾರು 1,279 ಕೋಟಿ ರೂ.ವೆಚ್ಚದಲ್ಲಿ ‘ಭದ್ರಾ ಮೇಲ್ದಂಡೆ ಯೋಜನೆ’ಯ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈಗಾಗಲೇ 1,085 ಕೋಟಿ ರೂ. ಅನುದಾನ ನೀಡಲಾಗಿದೆ. ಶೇ.69ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೆಪಿಟಿಸಿಎಲ್ ವತಿಯಿಂದ ನೀರೆತ್ತುವ ಪಂಪಹೌಸ್‌ಗಳಿಗೆ ಅಗತ್ಯವಿರುವ ವಿದ್ಯುತ್ ಲೈನ್‌ಗಳನ್ನು ಎಳೆಯುವಾಗ ವಿದ್ಯುತ್ ಲೈನ್‌ಗಳು ಜಮೀನುಗಳಲ್ಲಿ ಹಾದು ಹೋಗಿರುವ ರೈತರಿಗೆ ಪರಿಹಾರವನ್ನು ತಪ್ಪದೆ ನೀಡಬೇಕು. ಈ ಸಮಸ್ಯೆಯನ್ನು ಬಗೆಹರಿಸಲು ಕಂದಾಯ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಮಾಲತೇಶ್, ವಿಶ್ವೇಶ್ವರಯ್ಯ ಜಲನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಜಯಪ್ರಕಾಶ್, ಇಂಜಿನಿಯರ್ ಆರ್.ಚಲವರಾಜ್, ಸೂಪರ್‌ಡೆಂಟ್ ಇಂಜಿನಿಯರ್ ತಿಪ್ಪೇಸ್ವಾಮಿ, ಉಪವಿಭಾಗ ಅಧಿಕಾರಿ ಸರೋಜಾ, ಕಾರ್ಯನಿರ್ವಾಹಕ ಇಂಜಿನಿಯರ್ ತ್ರಿಯಂಭಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನೀರಿನ ಸೌಲಭ್ಯ
ಕಾಮಗಾರಿಯನ್ನು ಕೈಗೊಳ್ಳುವಾಗ ಆಧುನಿಕ ಹಾಗೂ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಹಾಗೂ ಸುರಕ್ಷತೆಯೊಂದಿಗೆ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ತೊಂದರೆಗೆ ಒಳಗಾದ ಭೂ ಪ್ರದೇಶಗಳಗೆ ನೀರು ಒದಗಿಸುವ ಉದ್ದೇಶದಿಂದ 79 ಎಕರೆಗೆ ನೀರು ಹಾಯಿಸುವುದು, 50 ಸಾವಿರ ಎಕರೆಗೆ ಹನಿ ನೀರಾವರಿ ಪದ್ಧ್ದತಿಯಡಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಇದು ಸರಕಾರ ಮಟ್ಟದಲ್ಲಿ ಪಿಪಿಆರ್ ಆಗಿದ್ದು, ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಇದರಿಂದಾಗಿ ಅಜ್ಜಂಪುರ, ಶಿವನಿ ಅಮೃತಪುರ ಹೋಬಳಿಗಳ ಪ್ರದೇಶಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ.







