ಪಾಕಿಸ್ತಾನ ಸೇನೆಗೆ ಸೇರ್ಪಡೆಯಾಗುವೆ: ಸ್ಯಾಮುಯೆಲ್ಸ್

ಗಯಾನ, ಮಾ.12: ಇತ್ತೀಚೆಗೆ ಕೊನೆಗೊಂಡ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ(ಪಿಎಸ್‌ಎಲ್) ಏರ್ಪಡಿಸಲಾಗಿದ್ದ ಬಿಗಿ ಭದ್ರತಾ ವ್ಯವಸ್ಥೆಯಿಂದ ಉತ್ತೇಜಿತಗೊಂಡಿರುವ ವೆಸ್ಟ್‌ಇಂಡೀಸ್ ಸ್ಟಾರ್ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಪಾಕಿಸ್ತಾನದ ಸೇನೆ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ.
ಸ್ಯಾಮುಯೆಲ್ಸ್ ಪಿಎಸ್‌ಎಲ್ ಚಾಂಪಿಯನ್ ಪೇಶಾವರ ಝೂಲ್ಮಿ ತಂಡದಲ್ಲಿ ಆಡಿದ್ದರು. ಪಿಎಸ್‌ಎಲ್ ಫೈನಲ್ ಪಂದ್ಯ ನಡೆದಿದ್ದ ಲಾಹೋರ್ ಸ್ಟೇಡಿಯಂನಲ್ಲಿ ಉನ್ನತ ಮಟ್ಟದ ಭದ್ರತೆಯನ್ನು ಏರ್ಪಡಿಸಿದ್ದ ಪಾಕ್ ಸರಕಾರವನ್ನು ಶ್ಲಾಘಿಸಿದ್ದಾರೆ.
‘‘ಜಮೈಕಾದಲ್ಲಿ ನಾನು ಓರ್ವ ಸೈನಿಕನಾಗಿದ್ದೇನೆ. ಪಾಕಿಸ್ತಾನ ಸೇನೆಗೆ ಸೇರಲು ಬಯಸಿದ್ದೇನೆ. ಪಾಕ್ ಸೇನೆ ನನ್ನನ್ನು ಆಹ್ವಾನಿಸಿದರೆ ನಾನು ಸದಾಸಿದ್ಧವಿದ್ದೇನೆ. ನನ್ನ ಸೈನ್ಯದ ಸಮವಸ್ತ್ರ ಧರಿಸಿ ಪಾಕ್‌ಗೆ ತೆರಳಲು ಸಿದ್ಧ’’ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಸಂದೇಶದಲ್ಲಿ ತಿಳಿಸಿದ್ದಾರೆ. ‘‘ನನಗೆ ಪಾಕಿಸ್ತಾನವೆಂದರೆ ತುಂಬಾ ಇಷ್ಟ. ಆದ್ದರಿಂದ ಹೆಚ್ಚು ಯೋಚನೆ ಮಾಡದೇ ಪಿಎಸ್‌ಎಲ್ ಫೈನಲ್ ಪಂದ್ಯ ಆಡಲು ಲಾಹೋರ್‌ಗೆ ತೆರಳಲು ನಿರ್ಧರಿಸಿದ್ದೆ’’ ಎಂದು ಸ್ಯಾಮುಯೆಲ್ಸ್‌ರ ವೀಡಿಯೋ ಹೇಳಿಕೆಯನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಸ್ಯಾಮುಯೆಲ್ಸ್ ವಿಡಿಯೊ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಪೇಶಾವರ ತಂಡದ ಸಿಇಒ ಜಾವೇದ್ ಅಫ್ರಿದಿ‘‘ನಿಮ್ಮ ಚಿನ್ನದಂತಹ ಪದಗಳು ವಿಶ್ವಕ್ಕೆ ಒಂದು ಸಂದೇಶವಾಗಿದೆ. ನಮ್ಮ ಶಾಂತಿಬಯಸುವ ರಾಷ್ಟ್ರ. ನಾವು ಕ್ರಿಕೆಟ್‌ನ್ನು ತುಂಬಾ ಇಷ್ಟಪಡುತ್ತೇವೆ. ನೀವು ಹೃದಯಗಳ ಚಾಂಪಿಯನ್ ಆಗಿದ್ದೀರಿ ಎಂದು ಹೇಳಿದ್ದಾರೆ.







