ವಿಶ್ವದಾಖಲೆ ವೀರ ನೀರಜ್ ಚೋಪ್ರಾಗೆ ಸೇನೆಯಲ್ಲಿ ಉದ್ಯೋಗಪ್ರಾಪ್ತಿ

ಹೊಸದಿಲ್ಲಿ, ಮಾ.12: ವಿಶ್ವ ದಾಖಲೆ ನಿರ್ಮಿಸಿರುವ ಭಾರತದ ಏಕೈಕ ಅಥ್ಲೀಟ್, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೇನೆಯಲ್ಲಿ ಉದ್ಯೋಗ ದೊರೆತಿದ್ದು, ತನಗೆ ಈತನಕ ಬೆಂಬಲಕ್ಕೆ ನಿಂತಿದ್ದ ತಂದೆಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗಿದ್ದಕ್ಕೆ ತೃಪ್ತಿವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಜೂನಿಯರ್ ಜಾವೆಲಿನ್ ಎಸೆತದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ಚೋಪ್ರಾ ಭಾರತೀಯ ಸೇನೆಯಲ್ಲಿ ಜೂನಿಯರ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.
‘‘ನಾನು ಈತನಕ ಚಂಡೀಗಡ ಕಾಲೇಜಿನಲ್ಲಿ ಓದುತ್ತಿದ್ದೆ. ಇನ್ನು ಮುಂದೆ ಕರೆಸ್ಪಾಂಡೆನ್ಸ್ ಕೋರ್ಸ್‌ನ ಮೂಲಕ ಪದವಿ ಪೂರ್ಣಗೊಳಿಸುವೆ. ಜೂನಿಯರ್ ಅಧಿಕಾರಿಯಾಗಿ ಭಾರತೀಯ ಸೇನೆಯನ್ನು ಸೇರ್ಪಡೆಯಾಗಿರುವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಲ್ಲ ಪ್ರಕ್ರಿಯೆಯನ್ನು ಪೂರೈಸಿದ್ದು, ಹೊಸದಿಲ್ಲಿಯ ಪ್ರಧಾನಕಚೇರಿಯಲ್ಲಿ ಹುದ್ದೆಗೆ ಸೇರ್ಪಡೆಯಾಗಿದ್ದೇನೆ. ಇದೀಗ ರಜೆಯಲ್ಲಿದ್ದು ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ತರಬೇತಿ ನಿರತನಾಗಿದ್ದೇನೆ’’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಚೋಪ್ರಾ ಹೇಳಿದ್ದಾರೆ.
‘‘ನನ್ನ ತಂದೆ ಕೃಷಿಕರು. ತಾಯಿ ಗೃಹಿಣಿ. ನಾನು ಕೂಡುಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ. ನನ್ನ ಕುಟುಂಬದ ಯಾವೊಬ್ಬ ಸದಸ್ಯನೂ ಸರಕಾರಿ ಉದ್ಯೋಗದಲ್ಲಿಲ್ಲ. ನನಗೆ ಸರಕಾರಿ ಉದ್ಯೋಗ ಲಭಿಸಿದ್ದಕ್ಕೆ ಎಲ್ಲರಿಗೂ ಸಂತೋಷವಾಗಿದೆ. ನನ್ನ ತರಬೇತಿಯ ಜೊತೆಗೆ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು ಸಮರ್ಥನಾಗಿದ್ದಕ್ಕೆ ನಾನೀಗ ನಿರಾಳವಾಗಿದ್ದೇನೆ’’ ಎಂದು ಹರ್ಯಾಣದ ಪಾಣಿಪತ್ ಸಮೀಪದ ಖಾಂದ್ರಾ ಹಳ್ಳಿಯ 19ರ ಹರೆಯದ ಚೋಪ್ರಾ ತಿಳಿಸಿದ್ದಾರೆ.
2016ರಲ್ಲಿ ಪೊಲೆಂಡ್‌ನಲ್ಲಿ ನಡೆದಿದ್ದ ಐಎಎಎಫ್ ವರ್ಲ್ಡ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ 86.48 ಮೀ.ದೂರಕ್ಕೆ ಜಾವೆಲಿನ್‌ನ್ನು ಎಸೆದಿದ್ದ ಚೋಪ್ರಾ ನೂತನ ಜೂನಿಯರ್ ವಿಶ್ವ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು.
ಪೊಲೆಂಡ್‌ನಲ್ಲಿ ಜೂನಿಯರ್ ವಿಭಾಗದಲ್ಲಿ ವಿಶ್ವದಾಖಲೆಯ ಪ್ರದರ್ಶನ ನೀಡಿದ ಹೊರತಾಗಿಯೂ ಚೋಪ್ರಾ ಕಳೆದ ವರ್ಷ ಬಿಡುಗಡೆಯಾಗಿದ್ದ ಹಿರಿಯರ ರ್ಯಾಂಕಿಂಗ್‌ನಲ್ಲಿ 11ನೆ ಸ್ಥಾನ ತಲುಪಿದ್ದರು.
ಇದೀಗ ಆಸ್ಟ್ರೇಲಿಯ ಕೋಚ್ ಗ್ಯಾರಿ ಕಾಲ್‌ವೆರ್ಟ್‌ರೊಂದಿಗೆ ಕಠಿಣ ಅಭ್ಯಾಸ ನಡೆಸುತ್ತಿರುವ ಚೋಪ್ರಾ ಡೈಮಂಡ್ ಲೀಗ್ ಕೂಟ, ಹಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಗುರಿ ಹಾಕಿಕೊಂಡಿದ್ದಾರೆ.
‘‘ಈ ವರ್ಷ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದು ನನ್ನಮುಂದಿರುವ ಮುಖ್ಯ ಗುರಿ. ನಾನು ಭಾರತದಿಂದ ಹೊರಗೆ ಅದರಲ್ಲೂ ಯುರೋಪ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಸಿರೀಸ್‌ನಲ್ಲಿ ಭಾಗವಹಿಸುವ ಆಸೆ ನನಗಿದೆ. ವಿಶ್ವ ಚಾಂಪಿಯನ್‌ಶಿಪ್‌ಗಿಂತ ಮೊದಲು ಡೈಮಂಡ್ ಲೀಗ್‌ನಲ್ಲಿ ಭಾಗವಹಿಸುತ್ತೇನೇಯೇ ಎಂಬ ಬಗ್ಗೆ ನನಗೆ ಏನೂ ಗೊತ್ತಿಲ್ಲ. 2020ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಉದ್ದೇಶವೂ ನನಗಿದೆ. ಅಥ್ಲೀಟ್‌ಗೆ ಒಲಿಂಪಿಕ್ಸ್ ಪದಕ ಅತ್ಯಂತ ಮಹತ್ವದ್ದು. ಅದಕ್ಕೂ ಮೊದಲು ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಆಕಾಂಕ್ಷೆ ಹೊಂದಿದ್ದೇನೆ’’ ಎಂದು ಚೋಪ್ರಾ ಹೇಳಿದ್ದಾರೆ.
ಕಳೆದ ವರ್ಷ ವಿಶ್ವ ದಾಖಲೆ ನಿರ್ಮಿಸಿದ ಬಳಿಕ ನೀವು ಒತ್ತಡ ಎದುರಿಸಿದ್ದೀರಾ? ಎಂದು ಕೇಳಿದಾಗ,‘‘ನಾನೀಗ ಕಿರಿಯ ಅಥ್ಲೀಟ್. ಇನ್ನಷ್ಟು ದೂರ ಕ್ರಮಿಸಬೇಕಾಗಿದೆ. ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ನನ್ನ ಮೇಲೆ ಭಾರೀ ನಿರೀಕ್ಷೆಯಿದೆ ಎಂದು ನನಗೆ ಗೊತ್ತಿದೆ. ಆದರೆ, ನನ್ನ ಮೇಲೆ ಒತ್ತಡವಿಲ್ಲ. ನನ್ನ ಕರ್ತವ್ಯದತ್ತ ಗಮನ ನೀಡುವೆ. ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ’’ ಎಂದು ಹೇಳಿದರು.







