ಇಂಡಿಯನ್ ವೇಲ್ಸ್: ಮರ್ರೆಗೆ ಆಘಾತಕಾರಿ ಸೋಲು

ಇಂಡಿಯನ್ ವೇಲ್ಸ್(ಅಮೆರಿಕ), ಮಾ.12: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಕೆನಡಾದ 129ನೆ ರ್ಯಾಂಕಿನ ಆಟಗಾರ ವೆಸೆಕ್ ಪೊಸ್ಪಿಸಿಲ್ ವಿರುದ್ಧ ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಸೋಲುವುದರೊಂದಿಗೆ ಎಟಿಟಿ ಇಂಡಿಯನ್ ವೇಲ್ಸ್ ಮಾಸ್ಟರ್ಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಇತ್ತೀಚೆಗಷ್ಟೇ ದುಬೈ ಓಪನ್ ಪ್ರಶಸ್ತಿ ಜಯಿಸಿರುವ ಮರ್ರೆ ಶನಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಮರ್ರೆ ಅವರು ಕೆನಡಾದ ಕ್ವಾಲಿಫೈಯರ್ ಪೊಸ್ಪಿಸಿಲ್ ವಿರುದ್ಧ 6-4, 7-6(7/5) ನೇರ ಸೆಟ್‌ಗಳಿಂದ ಶರಣಾದರು. ಪಾಸ್ಪಿಸಿಲ್ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿ ಸಿಂಗಲ್ಸ್ ವಿಭಾಗದಲ್ಲಿ ಸ್ಮರಣೀಯ ಜಯ ಸಾಧಿಸಿದ್ದಾರೆ. 2014ರಲ್ಲಿ ಅಮೆರಿಕದ ಜಾಕ್ ಸಾಕ್ ಜೊತೆಗೂಡಿ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಜಯಿಸಿರುವುದು ಪೊಸ್ಪಿಸಿಲ್ರ ಈವರೆಗಿನ ಸಾಧನೆ.
ಮರ್ರೆ ವಿರುದ್ಧ ಈವರೆಗೆ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಸೋತಿದ್ದ ಪೊಸ್ಪಿಸಿಲ್ ಮೊದಲ ಬಾರಿ ಗೆಲುವು ಸಾಧಿಸಿದ್ದಾರೆ. 3 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಮರ್ರೆಗೆ ಈ ಸೋಲು ಆಘಾತ ತಂದಿದೆ.
ಮರ್ರೆ 2009ರಲ್ಲಿ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ, ರಫೆಲ್ ನಡಾಲ್‌ಗೆ ಸೋಲುವುದರೊಂದಿಗೆ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟಿದ್ದರು.ಮರ್ರೆ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾಲ್ಕನೆ ಸುತ್ತಿನಲ್ಲಿ ಸೋತಿದ್ದರು.
ಮರ್ರೆಯನ್ನು ಸೋಲಿಸಿ ಎರಡನೆ ಸುತ್ತು ತಲುಪಿರುವ ಪೊಸ್ಪಿಸಿಲ್ ಮುಂದಿನ ಸುತ್ತಿನಲ್ಲಿ ಸರ್ಬಿಯದ ಕ್ವಾಲಿಫೈಯರ್ ದುಸಾನ್ ಲಾಜೊವಿಕ್‌ರನ್ನು ಎದುರಿಸಲಿದ್ದಾರೆ. ಲಾಜೊವಿಕ್ ಸ್ಪೇನ್‌ನ ಫೆಲಿಸಿಯಾನೊ ಲೊಪೆಝ್ ವಿರುದ್ಧ 6-2, 4-6, 7-6(7/2) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಸೋಂಗ್‌ಗೆ ಸೋಲು: ಫ್ರಾನ್ಸ್‌ನ ಏಳನೆ ಶ್ರೇಯಾಂಕದ ಆಟಗಾರ ಜೋ-ವಿಲ್ಫ್ರೆಡ್ ಸೋಂಗ ಮೊದಲ ಸುತ್ತಿನ ಪಂದ್ಯದಲ್ಲಿ ಇಟಲಿಯ ಫ್ಯಾಬಿಯೊ ಫೋಗ್ನಿನಿ ವಿರುದ್ಧ 7-6(7/4), 3-6, 6-4 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ವಿಶ್ವದ 47ನೆ ಆಟಗಾರ ಫೋಗ್ನಿನಿ ಅವರು ಸೋಂಗ ವಿರುದ್ಧ ಆಡಿರುವ 5ನೆ ಪಂದ್ಯದಲ್ಲಿ ಮೊದಲ ಬಾರಿ ಗೆಲುವು ದಾಖಲಿಸಿದರು. ಸತತ 9 ಪಂದ್ಯಗಳಲ್ಲಿ ಜಯ ಸಾಧಿಸಿರುವ ಸೋಂಗ ಅವರ ಗೆಲುವಿನ ಓಟಕ್ಕೆ ಫೋಗ್ನಿನಿ ಕಡಿವಾಣ ಹಾಕಿದರು.
ವೀನಸ್ ವಿಲಿಯಮ್ಸ್‌ಗೆ ಗೆಲುವು: ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ವಿಶ್ವದ ಮಾಜಿ ನಂ.1 ಆಟಗಾರ್ತಿ ಜೆಲೆನಾ ಜಾಂಕೊವಿಕ್ ವಿರುದ್ಧ 1-6, 7-6(5), 6-1 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ 2001ರ ಬಳಿಕ ಮೊದಲ ಬಾರಿ ಮೂರನೆ ಸುತ್ತಿಗೆ ತಲುಪಿದ್ದಾರೆ.







