ಕೇರಳದಲ್ಲಿ ವಿದ್ಯುತ್ ಕಡಿತ ಇಲ್ಲ: ಸಚಿವ ಮಣಿ

ಕಾಸರಗೋಡು, ಮಾ.12: ರಾಜ್ಯದಲ್ಲಿ ವಿದ್ಯುತ್ ಕಡಿತಕ್ಕೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಕೇರಳ ವಿದ್ಯುತ್ ಸಚಿವ ಎಂ.ಎಂ.ಮಣಿ ಹೇಳಿದ್ದಾರೆ.
ಕುಂಬಳೆಯ ಸೀತಾಂಗೋಳಿಯಲ್ಲಿ ವಿದ್ಯುನ್ಮಂಡಲಿ ಉಪ ಕಚೇರಿಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ವಿದ್ಯುತ್ ಉತ್ಪಾದನೆಗಿರುವ ನೀರಿನ ಕೊರತೆ ಉಂಟಾಗಿದೆ. ಆದರೂ ವಿದ್ಯುತ್ ಕಡಿತ ಅಥವಾ ಲೋಡ್ ಶೆಡ್ಡಿಂಗ್ ನಡೆಸುವ ಯಾವುದೇ ಉದ್ದೇಶವನ್ನು ಸರಕಾರ ಹೊಂದಿಲ್ಲ ಎಂದರು.
ಮುಂದಕ್ಕೆ ಉಷ್ಣ ವಿದ್ಯುತ್ ಉತ್ಪಾದನೆಯತ್ತ ಹೆಚ್ಚಿನ ಗಮನ ನೀಡಬೇಕಿದೆ. ಹೊಸದಾಗಿ ನಿರ್ಮಿಸುವ ಮನೆಗಳಿಗೆ ಸೌರ ವಿದ್ಯುತ್ ಅಳವಡಿಸಲು ಪ್ರತಿಯೊಬ್ಬರೂ ಮುಂದೆ ಬರಬೇಕು ಎಂದವರು ಕರೆ ನೀಡಿದರು.
ಮಾರ್ಚ್ 31ರೊಳಗೆ ರಾಜ್ಯವನ್ನು ಸಂಪೂರ್ಣ ವಿದ್ಯುದ್ದೀ ಕರಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವ ಎಂ.ಎಂ.ಮಣಿ ತಿಳಿಸಿದರು.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರವನ್ನು ಸಂಪೂರ್ಣ ವಿದ್ಯುದ್ದೀಕರಣ ಕ್ಷೇತ್ರ ಎಂದು ಸಚಿವರು ಇದೇ ಸಂದರ್ಭ ಘೋಷಿಸಿದರು.
ಶಾಸಕರಾದ ಪಿ.ಬಿ.ಅಬ್ದುಲ್ ರಝಾಕ್, ಎನ್.ಎ. ನೆಲ್ಲಿಕುನ್ನು, ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರ್, ಬದಿಯಡ್ಕ ಪಂಚಾಯತ್ ಅಧ್ಯಕ್ಷ ಕೆ.ಕೃಷ್ಣ ಭಟ್, ಕುಂಬಳೆ ಗ್ರಾಪಂ ಅಧ್ಯಕ್ಷ ಕೆ.ಎನ್.ಪುಂಡರೀಕಾಕ್ಷ, ಜಿಪಂ ಸದಸ್ಯೆ ಪುಷ್ಪಾಆಮೆಕ್ಕಳ, ಮಧೂರು ಗ್ರಾಪಂ ಅಧ್ಯಕ್ಷೆ ಮಾಲತಿ ಸುರೇಶ್, ಎಂ.ಪ್ರದೀಪ್ ಕುಮಾರ್, ಇ.ಕೆ. ಮುಹಮ್ಮದ್ ಕುಂಞಿ, ಮಾಜಿ ಶಾಸಕ ಸಿ.ಎಚ್.ಕುಂಞಂಬು, ಕೆ.ಪಿ.ಸತೀಶ್ಚಂದ್ರನ್, ವಿದ್ಯುನ್ಮಂಡಲಿಯ ಎನ್. ವೇಣುಗೋಪಾಲ್, ರಾಜ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







