ಮೂರು ವಾರಗಳಲ್ಲಿ ಒಂದೇ ಶಾಲೆಯ 6 ವಿದ್ಯಾರ್ಥಿನಿಯರಿಂದ ನಿಗೂಢ ಆತ್ಮಹತ್ಯೆ

ಭೋಪಾಲ್, ಮಾ.13: ಸಮೀಪದ ಸಿದ್ಧಿ ಜಿಲ್ಲೆಯ ಸರಕಾರಿ ಶಾಲೆಯೊಂದರ ಆರು ಮಂದಿ ವಿದ್ಯಾರ್ಥಿನಿಯರು ಕಳೆದ ಮೂರು ವಾರಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಒಂದೇ ತೆರನಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರು ಹಾಗೂ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ಈ ನಿಗೂಢ ಭೇದಿಸಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ.
ಸಫಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಇವರು, ಯಾವುದೇ ಆತ್ಮಹತ್ಯೆ ಟಿಪ್ಪಣಿಯನ್ನೂ ಇಡದೇ ತಮ್ಮ ತಮ್ಮ ಮನೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಿ ಜಿಲ್ಲೆಯ ಜಿಲ್ಲಾಕೇಂದ್ರದಿಂದ 25 ಕಿಲೋಮೀಟರ್ ದೂರದಲ್ಲಿ ಈ ಶಾಲೆ ಇದೆ. ಈ ಬಾಲಕಿಯರು ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದರು; ಬೇರೆ ಬೇರೆ ವಯಸ್ಸಿನವರೂ ಆಗಿದ್ದು, ಬೇರೆ ಬೇರೆ ಗ್ರಾಮದವರು ಎಂದು ಹೇಳಲಾಗಿದೆ.
ಅವರು ಖಿನ್ನತೆಯಿಂದ ಬಳಲುತ್ತಿದ್ದ ಯಾವುದೇ ಲಕ್ಷಣಗಳು ಇರಲಿಲ್ಲ ಎಂದು ಸಂತ್ರಸ್ತರ ಕುಟುಂಬಗಳ ಜತೆ ಚರ್ಚಿಸಿದ ಬಳಿಕ ಪೊಲೀಸರು ಹೇಳಿದ್ದಾರೆ.
ಸಾವಿಗೆ ಯಾವುದೇ ಮಹತ್ವದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 9ರಂದು ರಾಣಿ ಯಾದವ್ (14) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೂ ಮುನ್ನ ಆಕಾಂಕ್ಷ ಶುಕ್ಲಾ (17), ಅಮೃತಾ ಗುಪ್ತಾ (18)ಮ, ಅನಿತಾ ಸಾಹು (16) ಅವರೂ ಫೆಬ್ರವರಿ 27ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.







