ಒಮಿನಿ ಮತ್ತು ಕಾರು ಢಿಕ್ಕಿ: ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಾಣಾಪಾಯದಿಂದ ಪಾರು

ಪುತ್ತೂರು, ಮಾ.13: ರಾಜ್ಯದ ಮಾಜಿ ಸಚಿವ ಕಾಪು ಕ್ಷೇತ್ರದ ಶಾಸಕ ವಿನಯಕುಮಾರ್ ಸೊರಕೆ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಮಾರುತಿ ಒಮ್ನಿ ಕಾರೊಂದರ ನಡುವೆ ಢಿಕ್ಕಿ ಸಂಭವಿಸಿ ಸೊರಕೆಯವರು ಅಪಾಯದಿಂದ ಪಾರಾದ ಹಾಗೂ ಇಬ್ಬರು ಚಾಲಕರು ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಪುತ್ತೂರು ನಗರದ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ.
ಶಾಸಕ ವಿನಯಕುಮಾರ್ ಸೊರಕೆ ಅವರು ಸೋಮವಾರ ಊರಿಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಮಂಗಳೂರು ಕಡೆಯಿಂದ ಶಾಸಕ ವಿನಯಕುಮಾರ್ ಸೊರಕೆ ಅವರು ಪ್ರಯಾಣಿಸಿಕೊಂಡು ಬರುತ್ತಿದ್ದ ಇನ್ನೋವಾ ಕಾರು ಮತ್ತು ಪುತ್ತೂರಿನಿಂದ ಕಬಕ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ನಡುವೆ ಬೈಪಾಸ್ ರಸ್ತೆಯ ಉರ್ಲಾಂಡಿ ಬಳಿ ಡಿಕ್ಕಿ ಸಂಭವಿಸಿದೆ.
ವಿನಯಕುಮಾರ್ ಸೊರಕೆ ಅವರು ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದು, ಅವರ ಕಾರಿನ ಚಾಲಕ ಸಚೀನ್ ಶೇಟ್ ಮತ್ತು ಓಮ್ನಿ ಚಾಲಕ ಶಾಂತಿಗೋಡು ಗ್ರಾಮದ ವೀರಮಂಗಲದ ರವೀಂದ್ರ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳಾದ ಸಚೀನ್ ಮತ್ತು ರವೀಂದ್ರ ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಶಾಸಕ ವಿನಯಕುಮಾರ್ ಸೊರಕೆ ಅವರ ಇನ್ನೋವಾ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.





