ಶಾಹಿರಿ ಲೇಖಕ ಇಟಗಿ ಈರಣ್ಣ ಇನ್ನಿಲ್ಲ...

ಶಿವಮೊಗ್ಗ, ಮಾ. 13: ಕನ್ನಡ ಸಾಹಿತ್ಯ ಲೋಕದಲ್ಲಿ ಶಾಹಿರಿ ಕವಿಎಂದೇ ಖ್ಯಾತವಾಗಿದ್ದ ಸಾಹಿತಿ ಪ್ರೊ. ಇಟಗಿ ಈರಣ್ಣರವರು ಭಾನುವಾರ ರಾತ್ರಿ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ನಗರದ ಮಂಡ್ಲಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯಿತು. ಇದಕ್ಕೂ ಮುನ್ನ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಅಂತಿಮ ದರ್ಶನ ಪಡೆದರು.
ಇಟಗಿ ಈರಣ್ಣ ಅವರ ನಿಧನಕ್ಕೆ ಸಾಹಿತಿಗಳು, ಸಾಹಿತ್ಯಾಸಕ್ತರು ಸೇರಿದಂತೆ ವಿವಿಧ ಸಂಘಸಂಸ್ಥೆಗಳು ತೀವ್ರ ಶೋಕ ವ್ಯಕ್ತಪಡಿಸಿವೆ. ಇಟಗಿ ಈರಣ್ಣರವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ್‌ರವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಾಧನೆ:
ಇಟಗಿ ಈರಣ್ಣರವರು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಸಾಹಿತ್ಯದ ವಿವಿಧ ವಿಭಾಗಗಳಲ್ಲಿ ಸಾಕಷ್ಟು ಜ್ಞಾನ ಹೊಂದಿದ್ದ ಇವರು ಹಳಗನ್ನಡ ಸಾಹಿತ್ಯದಲ್ಲಿ ಅಪಾರ ಅನುಭವ ಹೊಂದಿದ್ದರು.
ಶಾಹಿರಿ, ನಾಟಕ, ಅನುವಾದ ಸೇರಿದಂತೆ ಸಾಹಿತ್ಯದ ವಿವಿಧ ವಿಭಾಗಗಳಲ್ಲಿ ಹಲವು ಕೃತಿಗಳನ್ನು ಬರೆದಿದ್ದಾರೆ. ವಚನಾಚಲ, ಕನ್ನಡ ಶಾಯರಿ, ಕಬೀರನ ದೋಹೆಗಳು, ಯಹೂದಿ, ರಾವಿ ನದಿಯ ದಂಡೆಇವರ ಪ್ರಮುಖ ಸಾಹಿತ್ಯ ಕೃತಿಗಳಾಗಿವೆ.
ನಾಟಕಗಳ ನಿರ್ದೇಶನ ಕೂಡ ಮಾಡಿದ್ದರು. ಕನ್ನಡದ ಚಲನಚಿತ್ರ ಸ್ಪರ್ಶಾ ದಲ್ಲಿರುವ ಶಾಹಿರಿಗಳನ್ನು ಹಾಗೂ ಈ ಸಿನಿಮಾದಲ್ಲಿರುವ ಚಂದಕ್ಕಿಂತಚಂದಾ...ಎಂಬ ಪ್ರಸಿದ್ದ ಗೀತೆಯನ್ನು ಇವರು ಬರೆದುಕೊಟ್ಟಿದ್ದರು. ಉತ್ತಮ ಭಾಷಣಕಾರರಾಗಿದ್ದರು. ಹಳೇಗನ್ನಡದ ಶಾಸ್ತ್ರೀಯ ಗ್ರಂಥ ಶಬ್ಧಮಣಿದರ್ಪಣದ ಕೃತಿಯನ್ನು ಸರಳ ಕನ್ನಡದಲ್ಲಿ ರಚಿಸುವ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದರು.
ಅನುವಾದ:
ಟಗಿ ಈರಣ್ಣರವರು ಅನುವಾದಕರಾಗಿಯೂ ಕೂಡ ಸಾಕಷ್ಟು ಹೆಸರು ಸಂಪಾದಿಸಿದ್ದರು. ಉರ್ದು ಮತ್ತು ಪರ್ಶಿಯನ್ ಭಾಷೆಯ ಭಾಷಾ ಜ್ಞಾನವನ್ನು ಅಪಾರವಾಗಿ ಹೊಂದಿದ್ದ ಅವರು, ಹಲವು ಶಾಹಿರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಈ ಮೂಲಕ ಶಾಹಿರಿ ಕವಿ ಎಂಬ ಖ್ಯಾತಿಗೆ ಪಾತ್ರವಾಗಿದ್ದರು.
ಕನ್ನಡದ ಪದ್ಯಗಳಲ್ಲಿ ಪರ್ಶಿಯನ್ ಮತ್ತು ಉರ್ದು ಭಾಷೆಯಲ್ಲಿರುವ ಕಾವ್ಯದ ಸೊಗಡನ್ನು ತಂದು ಒಂದು ಹೊಸ ಕಾವ್ಯಮಾರ್ಗವನ್ನೇ ಸೃಷ್ಟಿಸಿದ್ದರು. ಕನ್ನಡದಲ್ಲಿ ಗಜಲ್ ಕಟ್ಟುವ ಕೆಲಸವನ್ನು ಸುಮಾರು 20 ವರ್ಷಗಳಿಂದ ಅವರು ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಇಂತಹದೊಂದು ಪ್ರಯತ್ನ ಬಹಳ ಅಪರೂಪವಾಗಿದೆ ಎಂದು ಸಾಹಿತಿಗಳು ಹೇಳುತ್ತಾರೆ.
ಕೆಲ ದಿನಗಳ ಹಿಂದಷ್ಟೆ ತಾಯಿ ನಿಧನರಾಗಿದ್ದರು:
ಇಟಗಿ ಈರಣ್ಣರವರ ತಾಯಿಯು ಮಾ. 8 ರಂದು ನಿಧನರಾಗಿದ್ದರು. ತಾಯಿಯ ನಿಧನದ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅವರ ಮನೆಯಲ್ಲಿ ನಡೆದಿದ್ದವು. ಈ ಎಲ್ಲ ಕಾರ್ಯಕ್ರಮಗಳಲ್ಲಿಯೂ ಇಟಗಿ ಈರಣ್ಣರವರು ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ ರಾತ್ರಿ 9.30 ರ ಸುಮಾರಿಗೆ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಎದುರು ಮನೆಯಲ್ಲಿಯೇ ವಾಸವಾಗಿದ್ದ ವೈದ್ಯರೊಬ್ಬರು ತಕ್ಷಣವೇ ಮನೆಗೆ ಆಗಮಿಸಿ ತಪಾಸಣೆ ನಡೆಸಿದ್ದು, ಅಷ್ಟರಲ್ಲಾಗಲೇ ಇಟಗಿ ಈರಣ್ಣರವರು ಇಹಲೋಕ ತ್ಯಜಿಸಿದ್ದರು ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡುತ್ತವೆ.







