ಉಳಿತಾಯ ಖಾತೆಯಿಂದ ಹಣ ಹಿಂಪಡೆಯುವ ಮಿತಿ ಸಂಪೂರ್ಣ ತೆರವು

ಹೊಸದಿಲ್ಲಿ, ಮಾ.13: ಉಳಿತಾಯ ಖಾತೆಯಿಂದ ನಗದು ಹಿಂಪಡೆಯುವ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಸೋಮವಾರ ಸಂಪೂರ್ಣವಾಗಿ ತೆರವುಗೊಳಿಸಿದೆ.
ಕಳೆದ ವರ್ಷ ನವೆಂಬರ್ 8 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂ.ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ದೇಶದಲ್ಲಿ ನಗದು ಕೊರತೆ ಎದುರಾಗಿತ್ತು. ಆರ್‌ಬಿಐಗೆ ಜನರ ನಿರೀಕ್ಷೆಯಷ್ಟು ನಗದು ಪೂರೈಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಯಲ್ಲಿ ಮಿತಿಯನ್ನು ಹೇರಿತ್ತು.
ಉಳಿತಾಯ ಖಾತೆಯಿಂದ ನಗದು ಹಿಂಪಡೆಯುವಿಕೆಗೆ ವಿಧಿಸಲಾಗಿರುವ ಮಿತಿಯನ್ನು ಆರ್‌ಬಿಐ ಎರಡು ಹಂತದಲ್ಲಿ ಕಡಿಮೆ ಮಾಡಿದೆ. ಮೊದಲ ಹಂತದಲ್ಲಿ ಆರ್‌ಬಿಐ ಫೆ.20 ರಂದು ಉಳಿತಾಯ ಖಾತೆಗಳಿಂದ ಪ್ರತಿವಾರ ನಗದು ಹಿಂಪಡೆಯುವ ಮಿತಿಯನ್ನು 24,000 ರಿಂದ 50,000ಕ್ಕೂ ಹೆಚ್ಚಿಸಿತ್ತು. ಇದೀಗ ಉಳಿತಾಯ ಖಾತೆಯಿಂದ ಹಣ ಪಡೆಯಲು ಎಲ್ಲ ಮಿತಿಯನ್ನು ತೆಗೆದುಹಾಕಲಾಗಿದೆ ಎಂದು ಆರ್‌ಬಿಐ ಉಪ ಗವರ್ನರ್ ಆರ್. ಗಾಂಧಿ ತಿಳಿಸಿದ್ದಾರೆ.
ಆರ್‌ಬಿಐ ಫೆ.1 ರಂದು ಚಾಲ್ತಿ ಖಾತೆಗಳು, ಕ್ಯಾಶ್ ಕ್ರೆಡಿಟ್ ಖಾತೆಗಳು ಹಾಗೂ ಎಟಿಎಂನಿಂದ ಹಣ ಹಿಂಪಡೆಯುವ ಮಿತಿಯನ್ನು ಹಿಂದಕ್ಕೆ ಪಡೆದಿತ್ತು. ಆದರೆ, ಉಳಿತಾಯ ಖಾತೆಯಿಂದ ಹಣ ಹಿಂಪಡೆಯುವ ಮಿತಿಯನ್ನು ವಾರಕ್ಕೆ 24,000ಕ್ಕೆ ನಿಗದಿಪಡಿಸಿತ್ತು.







