ಗೋವಾ: ಮತಗಳಿಕೆಯಲ್ಲಿ ಬಿಜೆಪಿ ಮೇಲುಗೈ

ಪಣಜಿ,ಮಾ.13: ಗೋವಾದ 40 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ವಿಫಲವಾಗಿದ್ದ ಬಿಜೆಪಿ ಮತಗಳಿಕೆಯಲ್ಲಿ ಮುಂಚೂಣಿಯಲ್ಲಿತ್ತು ಎಂದು ಚುನಾವಣಾ ಆಯೋಗದ ಅಂಕಿ-ಅಂಶದಿಂದ ಗೊತ್ತಾಗಿದೆ.
ಬಿಜೆಪಿ ಒಟ್ಟು ಮತದಲ್ಲಿ 32.5ರಷ್ಟು ಮತಗಳಿಸಲು ಯಶಸ್ವಿಯಾಗಿತ್ತು. 40 ಸದಸ್ಯರನ್ನು ಒಳಗೊಂಡ ಗೋವಾ ಅಸೆಂಬ್ಲಿಯಲ್ಲಿ 17 ಸೀಟುಗಳನ್ನು ಪಡೆದಿದ್ದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಒಟ್ಟು ಮತದಲ್ಲಿ 28.4ರಷ್ಟು ಮತ ಗಳಿಸಿದೆ ಎಂದು ಚುನಾವಣಾ ಆಯೋಗದ ಅಂಕಿ-ಅಂಶದಿಂದ ಬಹಿರಂಗವಾಗಿದೆ.
13 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಆಡಳಿತಾರೂಢ ಬಿಜೆಪಿ ಬಹುಮತ ಪಡೆಯಲು 8 ಸ್ಥಾನಗಳ ಕೊರತೆ ಎದುರಿಸಿತ್ತು. ಆದಾಗ್ಯೂ ಉಳಿದ ಪಕ್ಷಗಳ ಬೆಂಬಲ ಪಡೆದು ಸರಕಾರ ರಚಿಸಲು ಮುಂದಾಗಿದೆ. ನಾಳೆ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.
ಮೂರು ಸೀಟುಗಳನ್ನು ಗೆದ್ದುಕೊಂಡಿರುವ ಮಹಾರಾಷ್ಟ್ರವಾಡಿ ಗೋಮಂತಕ್ ಪಾರ್ಟಿ ಒಟ್ಟು ಮತದಲ್ಲಿ 11.3 ಶೇ.ಮತ ಗಳಿಸಿದೆ. 1.2 ಶೇ.ರಷ್ಟು ನೋಟಾ ಮತ ಚಲಾವಣೆಯಾಗಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಗೋವಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೋಟಾ ಮತಗಳು ಚಲಾವಣೆಯಾಗಿದೆ ಎಂದು ಗೋವಾದ ಮುಖ್ಯ ಚುನಾವಣಾಧಿಕಾರಿ ಕುನಾಲ್ ತಿಳಿಸಿದ್ದಾರೆ.
ಕರಾವಳಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಖಾತೆ ತೆರೆಯಲು ವಿಫಲವಾಗಿದೆ. ಆದರೆ,ಒಟ್ಟು ಮತದಲ್ಲಿ 6.3 ಶೇ. ಮತ ಗಳಿಸಿದೆ. ಸ್ವತಂತ್ರ ಅಭ್ಯರ್ಥಿಗಳು 11.1 ಶೇ., ಮೂರು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಗೋವಾ ಫಾರ್ವರ್ಡ್ ಪಾರ್ಟಿ 3.5 ಶೇ. ಹಾಗೂ ಒಂದು ಕ್ಷೇತ್ರದಲ್ಲಿ ಜಯಿಸಿದ್ದ ಎನ್‌ಸಿಪಿ ಒಟ್ಟು ಮತದಲ್ಲಿ 2.3 ಶೇ.ಮತ ಗಳಿಸಲು ಶಕ್ತವಾಗಿದೆ.
ಗೋವಾ ಸುರಕ್ಷಾ ಮಂಚ್ 1.2 ಶೇ. ಯುನೈಟೆಡ್ ಗೋವಾ ಶೇ.1, ಗೋವಾ ಸುರಾಜ್ ಪಕ್ಷ 0.6 ಹಾಗೂ ಗೋವಾ ವಿಕಾಸ್ ಪಾರ್ಟಿ 0.6 ಶೇ. ಮತ ಗಳಿಸಿದೆ ಎಂದು ಚುನಾವನಾ ಆಯೋಗದ ಅಂಕಿ-ಅಂಶ ತಿಳಿಸಿದೆ.







