ಕೇರಳ ಸಹಿತ ವಿವಿಧ ರಾಜ್ಯಗಳ 120 ಹೊಸ ಲೋಕಸಭಾ ಸ್ಥಾನಗಳ ಮೇಲೆ ಬಿಜೆಪಿ ಕಣ್ಣು

ಹೊಸದಿಲ್ಲಿ,ಮಾ.13: ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶದಿಂದ ಆತ್ಮವಿಶ್ವಾಸದಲ್ಲಿರುವ ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ಈಗಲೇ ಗಮನಹರಿಸಿದೆ. ಬಿಜೆಪಿಯ ಬೇರು ಗಟ್ಟಿಯಲ್ಲದ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ 120 ಕ್ಷೇತ್ರಗಳನ್ನು ಗುರುತಿಸಿ ಅಲ್ಲಿ ಪಕ್ಷದ ಕೆಲಸವನ್ನು ಆರಂಭಿಸುವ ಯೋಜನೆಯನ್ನು ಹಾಕಿದೆ. ಆಲಹಾಬಾದ್‌ನಲ್ಲಿ ಕಳೆದ ಜೂನ್‌ನಲ್ಲಿ ಸೇರಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಧಾರವನ್ನು ಜಾರಿಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ವೆಬ್‌ಪೋರ್ಟಲೊಂದು ವರದಿಮಾಡಿದೆ.
ಕೇರಳ ಸಹಿತ ಕೆಲವು ರಾಜ್ಯಗಳಿಂದ 120 ಕ್ಷೇತ್ರಗಳನ್ನು ಗಳಿಸಲು ಬಿಜೆಪಿ ಶ್ರಮವನ್ನು ಆರಂಭಿಸಿದೆ. ಆಂಧ್ರ ಪ್ರದೇಶ, ಪಶ್ಚಿಮಬಂಗಾಳ, ಈಶಾನ್ಯ ಭಾರತದ ರಾಜ್ಯಗಳು ಮುಂತಾದೆಡೆ ಬಿಜೆಪಿ ತನ್ನ ಬಲ ವೃದ್ಧಿಸಿಕೊಂಡು ಒಟ್ಟು 120 ಸಂಸದರನ್ನು ಗಳಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಎಲ್ಲ ಸ್ಥಳಗಳಲ್ಲಿ ಜನರ ವಿಷಯಗಳನ್ನೆತ್ತಿ ಸಕ್ರಿಯಗೊಳ್ಳಲು ಆರೆಸ್ಸೆಸ್ -ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಬಿಜೆಪಿಯ ಅಧ್ಯಕ್ಷ ಅಮಿತ್‌ಶಾ 120 ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಜಾರಿಗೆ ತಂದ ತಂತ್ರದಂತೆ ಈ ಕ್ಷೇತ್ರಗಳಲ್ಲಿ ಸಂಘಪರಿವಾರದ ಸಂಘಟನೆಗಳು ಕೆಳ ಮಟ್ಟದಿಂದಲೇ ಕೆಲಸವನ್ನು ಆರಂಭಿಸಿವೆ. ರೈತರು, ಮೀನುಗಾರರು, ಆದಿವಾಸಿಗಳು ಮುಂತಾದವರನ್ನು ಗುರಿಯಾಗಿಟ್ಟು ಅದು ಕೆಲಸ ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದ ಸ್ಥಾನಗಳು 2019ರ ಚುನಾವಣೆಯಲ್ಲಿ ಬಿಜೆಪಿ ಕಳಕೊಳ್ಳುವ ಸಾಧ್ಯತೆಗಳಿವೆ. ಈ ಕೊರತೆಯನ್ನು ಹೊಸ ಲೋಕಸಭಾ ಕ್ಷೇತ್ರಗಳಿಂದ ತುಂಬುವ ಯೋಜನೆಯನ್ನು ಬಿಜೆಪಿ ಮಾಡಿದೆ ಎಂದು ವರದಿ ತಿಳಿಸಿದೆ.