ಉಡುಪಿ ಸಹಿತ ಆರು ಕಡೆ ಕ್ರೀಡಾ ಅಕಾಡಮಿ ಸ್ಥಾಪನೆ: ಪ್ರಮೋದ್

ಉಡುಪಿ, ಮಾ.13: ಉಡುಪಿಯಲ್ಲಿ ಅಥ್ಲೆಟಿಕ್ಸ್, ಮೈಸೂರಿನಲ್ಲಿ ಕುಸ್ತಿ, ಬಿಜಾಪುರದಲ್ಲಿ ಸೈಕ್ಲಿಂಗ್ ಸೇರಿದಂತೆ ರಾಜ್ಯದಲ್ಲಿ ವಿವಿಧ ಕ್ರೀಡೆಗೆ ಸಂಬಂಧಿಸಿ ದಂತೆ ಆರು ಅಕಾಡೆಮಿಗಳನ್ನು ಸ್ಥಾಪಿಸಲು ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಕ್ರೀಡಾ ಸಾಧಕರಿಗೆ ಸೋಮವಾರ ಉಡುಪಿ ಗೋವಿಂದ ಕಲ್ಯಾಣ ಮಂಟಪದಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿರುವ ಒಟ್ಟು 32 ಕ್ರೀಡಾ ವಸತಿ ನಿಲಯಗಳಲ್ಲಿ 1,924 ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರ ಎಲ್ಲರ ಖರ್ಚನ್ನು ಸರಕಾರವೇ ಭರಿಸುತ್ತದೆ. ಇದೀಗ ಕ್ರೀಡಾ ವಸತಿ ನಿಲಯಗಳಿಗೆ 300 ಹೆಚ್ಚುವರಿ ಮಕ್ಕಳನ್ನು ಸೇರಿಸಲು ನಿರ್ಧರಿಸಲಾಗಿದೆ. ಅಲ್ಲದೆ ತರಗತಿ ಮಿತಿಯನ್ನು 7ರಿಂದ 10ನೆ ತರಗತಿವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ 1,000 ಪ್ರತಿಭಾವಂತ ಅಥ್ಲೆಟಿಕ್ಸ್‌ಗಳನ್ನು ಗುರುತಿಸಿ ಸರಕಾರ ಹಾಗೂ ಕಾರ್ಪೊರೇಟ್ ಕಂಪೆನಿಗಳು ದತ್ತು ಸ್ವೀಕರಿಸಿ ತರಬೇತಿ ನೀಡಲಿದ್ದು, ಇದರಲ್ಲಿ ಕಳಪೆ ನಿರ್ವಹಣೆ ತೋರುವ ಕ್ರೀಡಾಪಟುಗಳನ್ನು ಕೈಬಿಟ್ಟು ಬೇರೆಯವರನ್ನು ಸೇರ್ಪಡೆಗೊಳಿಸಲಾಗುತ್ತದೆ. ಕ್ರೀಡಾ ತರಬೇತುದಾರರ ಸಂಬಳವನ್ನು ಏರಿಕೆ ಮಾಡಲು ಇಲಾಖೆ ನಿರ್ಧರಿಸಿದೆ ಎಂದರು.
6.34ಕೋಟಿ ಜನಸಂಖ್ಯೆ ಇರುವ ಇಂಗ್ಲೆಂಡಿನ ವಾರ್ಷಿಕ ಕ್ರೀಡಾ ಬಜೆಟ್ 2,248ಕೋಟಿಯಾದರೆ, 6.40ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕ ರಾಜ್ಯದ ವಾರ್ಷಿಕ ಬಜೆಟ್ ಕೇವಲ 120ಕೋಟಿ ರೂ. ಮಾತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕ್ರೀಡಾಪಟುಗಳು ಮುಂದುವರೆದ ದೇಶಗಳ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಬೇಕಾದರೆ ಅವರಿಗೆ ಅಗತ್ಯ ತರಬೇತಿ ಬೇಕಾಗಿದೆ. ಆದುದರಿಂದ ಕ್ರೀಡಾ ಇಲಾಖೆಯ ಬಜೆಟ್‌ನ್ನು ಹೆಚ್ಚಿಸುವಂತೆ ಮುಖ್ಯ ಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರಾಷ್ಟ್ರಮಟ್ಟದ ಕ್ರೀಡಾಕೂಟದ 400ಮೀ. ಓಟದಲ್ಲಿ ಕಂಚಿನ ಪದಕ ಗೆದ್ದ ಪ್ರಜ್ಞಾ ಕೆ., ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಪ್ರಶಾಂತ್ ಕೆ.ಆರ್., ಅಭಿ ಷೇಕ್ ಚವ್ಹಾನ್, ಉಡುಪಿ ಕ್ರೀಡಾ ವಸತಿ ನಿಲಯದ ಅಥ್ಲೆಟಿಕ್ಸ್ ತರಬೇತು ದಾರ ಅನಂತರಾಮ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೋಮಪ್ಪ ತಿಂಗಳಾಯ, ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಕಿ ಜಯಲಕ್ಷ್ಮಿ ಅವರನ್ನು ಸಚಿವರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಲಯನೆಸ್ ಸಂಯೋಜಕಿ ನಿರುಪಮಾ ಪ್ರಸಾದ್ ಶೆಟ್ಟಿ, ವಿದ್ಯಾಂಗ ಉಪನಿರ್ದೇಶಕ ಎಚ್.ದಿವಾಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್, ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್., ಉದ್ಯಮಿ ಜಾಕೀರ್ ಹುಸೇನ್, ಅಂಬಲ ಪಾಡಿ ರೋಟರಿ ಅಧ್ಯಕ್ಷ ರೂಪೇಶ್, ಲಯನ್ಸ್ ಕ್ಲಬ್ ಕರಾವಳಿ ಉಡುಪಿ ಅಧ್ಯಕ್ಷ ಉಮಾಶಂಕರ್ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಶಾ ಟಿ. ಸ್ವಾಗತಿಸಿದರು. ಶಿಕ್ಷಕಿ ಪ್ರತಿಮಾ ವಂದಿಸಿ ದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಾಲಕಿಯರಿಗೆ ಪ್ರತ್ಯೇಕ ನಿಲಯ:
ಸದ್ಯಕ್ಕೆ ಕ್ರೀಡಾ ವಸತಿ ನಿಲಯಗಳಲ್ಲಿ ಬಾಲಕರು ಹಾಗೂ ಬಾಲಕಿಯರು ಒಟ್ಟಿಗೆ ಇದ್ದು, ಸುರಕ್ಷತೆಯ ದೃಷ್ಠಿಯಿಂದ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸ ಲಾಗಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ







