ಮಹಿಳೆಯ ಮೇಲಿನ ದೌರ್ಜನ್ಯ ರಾತ್ರಿ ಮಾತ್ರವಲ್ಲ ಹಗಲೂ ನಡೆಯುತ್ತಿವೆ: ಡಾ.ಶೈಲಾ

ಮಂಗಳೂರು, ಮಾ.13: ಹೆಣ್ಣು ಮಕ್ಕಳನ್ನು ಭಯದ ವಾತಾವರಣದಲ್ಲಿ ಬೆಳೆಸುತ್ತಿದ್ದೇವೆ. ಆಕೆ ಹೊರಗಡೆ ಹೋದಾಗ ಅತ್ಯಾಚಾರ ಆದೀತೆಂಬ ಭಯವನ್ನು ಹುಟ್ಟಿಸಿ ಮನೆಯಲ್ಲೇ ನಿರ್ಬಂಧಿಸಲಾಗುತ್ತಿದೆ. ರಾತ್ರಿಯಂತೂ ಹೊರಗೆ ಕಳುಹಿಸುವುದಿಲ್ಲ. ಆದರೆ ಮಹಿಳೆಯ ಮೇಲಿನ ದೌರ್ಜನ್ಯ ಕೇವಲ ರಾತ್ರಿ ಮಾತ್ರವಲ್ಲ, ಹಗಲೂ ನಡೆಯುತ್ತಿವೆ ಎಂದು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಹಾಗೂ ಪ್ರಾಧ್ಯಾಪಕಿ ಡಾ. ಶೈಲಾ ಯು.ಅಭಿಪ್ರಾಯಪಟ್ಟರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಸಮಿತಿಯು ನಗರದ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾನತೆಗಾಗಿ ಮಹಿಳೆಯರು ನಡೆಸುವ ಹೋರಾಟವು ಕುಟುಂಬದೊಳಗೆ ಅಭ್ಯಾಸವಾಗಬೇಕು. ಮನೆಯ ಗಂಡಸರು ಸಹಕಾರ ನೀಡದೆ ಹೋದರೆ ಸಮಾನತೆ ಬೆಳೆಸಲು ಸಾಧ್ಯವಿಲ್ಲ. ಇದಕ್ಕಾಗಿ ಗಂಡಸರು ಮಕ್ಕಳಿಗೂ ಗೃಹಕೃತ್ಯದ ಕೆಲಸ ಹಂಚಿಕೆಯಾಗಬೇಕು ಎಂದು ಹೇಳಿದರು.
ಮಹಿಳೆಯರು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸಲು ಉದ್ಯೋಗಕ್ಕೆ ಹೋಗುವುದು ಅನಿವಾರ್ಯವಾಗಿದೆ. ಹಾಗಿದ್ದರೂ ಮನೆಯ ಒಳಗಿನ ಆಕೆಯ ಕೆಲಸದ ಹೊರೆ ಕಡಿಮೆಯಾಗಿಲ್ಲ. ಅಲ್ಲದೆ ಮನೆಯ ಗೌರವವನ್ನು ಕಾಪಾಡುವುದನ್ನು ಅವಳು ನಿರ್ವಹಿಸುತ್ತಿದ್ದಾಳೆ. ಗಂಡಸರಿಗೆ ಸಣ್ಣಪುಟ್ಟ ಅಸೌಖ್ಯವಾದರೂ ಹೆಂಗಸರು ಕಾಳಜಿ ವಹಿಸುತ್ತಾರೆ. ಆದರೆ ತಮಗೇ ಅಸೌಖ್ಯ ಆದಾಗ ಅವರು ನಿರ್ಲಕ್ಷ ವಹಿಸುತ್ತಾರೆ. ಗಂಡು, ಹೆಣ್ಣು ಮಕ್ಕಳನ್ನು ಒಂದೇ ರೀತಿಯಲ್ಲಿ ಬೆಳೆಸಲು, ಹೆಂಗಸರು ಗಂಡಸರ ಮನೋಭಾವವನ್ನು ಬದಲಾಯಿಸಬೇಕು ಎಂದು ಡಾ. ಶೈಲಾ ಯು. ಹೇಳಿದರು.
ಈವತ್ತೂ ಕೆಲವು ಹೆಣ್ಣು ಮಕ್ಕಳು ಒಬ್ಬಂಟಿಗರಾಗಿ ಗೌರವಯುತ ಜೀವನ ನಡೆಸುತ್ತಿದ್ದಾರೆ. ಮನೆಗಳಿಂದ ಓಡಿಹೋಗುವ ಹೆಣ್ಣು ತನ್ನ ಮಕ್ಕಳನ್ನು ಕರೆದುಕೊಂಡೇ ಹೋಗುವುದನ್ನು ನೋಡುತ್ತೇವೆ. ಆಕೆ ತನ್ನ ಜವಾಬ್ದಾರಿಯಿಂದ ಎಂದೂ ತಪ್ಪಿಸಿಕೊಂಡಿಲ್ಲ. ಆದರೆ ಗಂಡಸು ಹಾಗೆ ನಡೆದುಕೊಳ್ಳುವುದಿಲ್ಲ. ವಯಸ್ಸಾದ ಹಿರಿಯರನ್ನು ನೋಡಿಕೊಳ್ಳುವವರು ಮಹಿಳೆಯರೇ ಆಗಿದ್ದಾರೆ. ಇವತ್ತು ಹೆಣ್ಣು ಭ್ರೂಣಹತ್ಯೆ ಹೆಚ್ಚಿವೆ. ವರದಕ್ಷಿಣೆ ತೋರಿಕೆಗೆ ಇಲ್ಲದಿದ್ದಾಗಲೂ ಬೇರೆ ಸ್ವರೂಪದಲ್ಲಿ ಕಾರ್ಯಾಚರಿಸುತ್ತಿದೆ. ಹೆಣ್ಣು ತನ್ನ ಸ್ವಾತಂತ್ರ್ಯವನ್ನು ಸಂಘಟಿತ ಹೋರಾಟದ ಮೂಲಕ ಉಳಿಸಿಕೊಳ್ಳುವುದಲ್ಲದೆ, ಶಿಸ್ತು ಮತ್ತು ಹೊಣೆಗಾರಿಕೆಯೊಂದಿಗೆ ಗಂಡಸರನ್ನು ಬದಲಾಯಿಸಬಲ್ಲರು ಎಂದು ಡಾ. ಶೈಲಾ ಯು. ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷೆ ಜಯಂತಿ ಬಿ.ಶೆಟ್ಟಿಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಹೇಮಲತಾ, ಪದ್ಮಾವತಿ ಶೆಟ್ಟಿ, ರಾಜ್ಯ ಸಮಿತಿ ಜೊತೆ ಕಾರ್ಯದರ್ಶಿ ಕಿರಣ ಪ್ರಭಾ ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆಯ ವಾಸುದೇವ ಉಚ್ಚಿಲ ಮಾತನಾಡಿದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ರಾಧಾ ಮೂಡುಬಿದಿರೆ ಸ್ವಾಗತಿಸಿದರು. ಕೋಶಾಧಿಕಾರಿ ವಿಲಾಸಿನಿ ತೊಕ್ಕೋಟು ವಂದಿಸಿದರು.







